
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ ಸೆ.15: ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಹಾಯವಾಗುತ್ತದೆ ಎಂದು ಗ್ರಾ.ಪಂ ಸದಸ್ಯ ಸೋಮಪ್ಪ ಉಪ್ಪಾರ ಅಭಿಪ್ರಾಯಪಟ್ಟರು.
ಅವರು ಮರಿಯಮ್ಮನಹಳ್ಳಿ ಸಮೀಪದ ನಂದಿಬಂಡಿ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ ಮರಿಯಮ್ಮನಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಕಲೆಗಳಾದ ಸಣ್ಣಾಟ, ದೊಡ್ಡಾಟ, ಕೋಲಾಟ, ಡೊಳ್ಳಿನ ಹಾಡು, ಜನಪದ ಗೀತೆ ಮುಂತಾದ ಕಲೆಗಳನ್ನು ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವಿಶೇಷ ಕಲಿಕೋತ್ಸವಗಳನ್ನು ಆಯೋಜಿಸಿ ಕಲಿಸುವುದರ ಮೂಲಕ ಮಕ್ಕಳಿಗೆ ಹಳ್ಳಿಯ ಸೊಗಡಿನ ಕಲೆ ಸಂಸ್ಕೃತಿಗಳನ್ನು ಕಲಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿ.ಆರ್.ಸಿ. ಸಮನ್ವಯಾಧಿಕಾರಿ ಟಿ.ಕೆ.ರೂಪಾ ಮಾತನಾಡಿ, ಪ್ರತಿಭಾ ಕಾರಂಜಿ ಕಳೆದ ಹತ್ತು ವರ್ಷಗಳಿಂದ ಜಾರಿಗೆ ಬಂದಿದೆ. ಮೊಬೈಲ್ ದುನಿಯಾದಲ್ಲಿ ಮಕ್ಕಳು ಕಲೆ ಸಂಸ್ಕೃತಿಗಳಿಂದ ದೂರವಾಗುತ್ತಿದ್ದಾರೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೊಬೈಲ್ ನಿಂದ ದೂರವಿದ್ದು, ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರತಿಭಾ ಕಾರಂಜಿಗಳು ಸಹಕಾರಿಯಾಗುತ್ತವೆ ಎಂದರು. ಮಕ್ಕಳು ಯಾವುದೇ ಕೀಳರಿಮೆಗಳಿಲ್ಲದೇ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಬೇರಾಚಾರಿ, ಮುಖ್ಯ ಶಿಕ್ಷಕ ಡಿ.ಯಮನೂರಪ್ಪ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಂ.ರೆಹಮಾನ್ ಸಾಹೇಬ್‌ರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಶಶಿಕಲಾ ಹನುಮಂತಪ್ಪ, ವಸಂತಕುಮಾರಿ ಜಗದೀಶ್, ಮುಖಂಡರಾದ ಉಪ್ಪಾರ ಬಸಪ್ಪ, ಎ.ಕೆ. ಜಗದೀಶ್, ಕೆ.ಮಲ್ಲಿಕಾರ್ಜುನ, ಎಂ.ಕೊಮಾರೆಪ್ಪ, ಉಪ್ಪಾರ ಸಣ್ಣ ಲಕ್ಷ್ಮಪ್ಪ , ಬಡಗಿ ರಾಮಪ್ಪ, ಮಾಜಿ ಗ್ರಾ.ಪಂ. ಅಧ್ಯಕ್ಷೆ ಅಕ್ಕಮಹಾದೇವಿ, ಮುಖ್ಯ ಶಿಕ್ಷಕಿ ಸುನೀತ,ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ಪರುಶುರಾಮ, ಸಿ.ಆರ್.ಪಿ.ಕರಿಬಸಪ್ಪ, ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಗುಂಡಾ, ಗುಂಡಾ ತಾಂಡಾ, ನಂದಿಬಂಡಿ ದೇವಲಾಪುರ, ಮರಿಯಮ್ಮನಹಳ್ಳಿ ಪಟ್ಟಣ ಸೇರಿದಂತೆ ವಿವಿಧ ಶಾಲೆಗಳ 1 ರಿಂದ 10ನೇ ತರಗತಿಯ ಮಕ್ಕಳಿಂದ ಛದ್ಮವೇಷ, ಜಾನಪದ ನೃತ್ಯ, ಕಂಠಪಾಠ, ಅರೇಬಿಕ್ ಮತ್ತು ಧಾರ್ಮಿಕ ಪಠಣ, ಮಣ್ಣಿನ ಶಿಲ್ಪ ತಯಾರಿ, ರಂಗೋಲಿ, ಚಿತ್ರಕಲೆ, ರಸಪ್ರಶ್ನೆ, ಅಶುಭಾಷಣ, ಅಣಕು ಪ್ರದರ್ಶನ, ಕೋಲಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು.