ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಪಾಲಕರು ಹೆಚ್ಚು ಆಸಕ್ತಿ ವಹಿಸಿ: ಕಲಬುರಗಿ

ಕಲಬುರಗಿ:ಆ.21: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳ ಅನಾವರಣಕ್ಕೆ ಪಾಲಕರು ಹೆಚ್ಚು ಜವಾಬ್ದಾರಿಯೊಂದಿಗೆ ಆಸಕ್ತಿ ವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಬಸವರಾಜ ಕಲಬುರಗಿ ಅಭಿಪ್ರಾಯಪಟ್ಟರು.

ನಗರದ ಕೋರ್ಟ ರಸ್ತೆಯ ವಿಶ್ವೇಶ್ವರಯ್ಯ ಭವನದಲ್ಲಿ ರವಿವಾರ ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ-2023 ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸರಿಸಮಾನವಾಗಿ ಗಮನಿಸುವಂತೆ ಪೋಷಕರು ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಶಿಸ್ತು ಬದ್ಧತೆಯಿಂದ ವಿದ್ಯಾರ್ಥಿಗಳು ತಮ್ಮ ದಿನಚರಿಯನ್ನು ಪರಿಪಾಲಿಸಬೇಕು. ತಂದೆ-ತಾಯಿಯರನ್ನು ಗೌರವಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಮಕ್ಕಳ ಸನ್ಮಾನ ಗೌರವವನ್ನು ಕಣ್ಣು ತುಂಬಿಕೊಳ್ಳಲು ಸಮಾರಂಭಕ್ಕೆ ಆಗಮಿಸಿ ಪಾಲ್ಗೊಳ್ಳುವ ಪ್ರಕ್ರಿಯೆ ನೋಡಿ ಸಂತಸವಾಗಿದ್ದು, ಪ್ರತಿ ವರ್ಷ ಸಂಘದವರು ಪ್ರತಿಭಾ ಪುರಸ್ಕಾರ ಹಮ್ಮಿಕೊಂಡು ಪ್ರತಿಭೆಗಳ ಅನ್ವೇಷಣೆಗೆ ಕಾರಣವಾಗಿರುವುದು ಸ್ತುತ್ಯಾರ್ಹ ವಿಷಯ ಎಂದರು.

ಹುಮನಾಬಾದನ ಸರಕಾರಿ ಕಿರಿಯ ಮಹಾವಿದ್ಯಾಲಯ ಪ್ರಾಚಾರ್ಯ ಪಂಡರಿನಾಥ ಹುಗ್ಗಿ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ನೇಕಾರ ಬದುಕಿನ ಕಲೆ ಅರ್ಥಮಾಡಿಕೊಳ್ಳುವುದು ಕಷ್ಟದಾಯಕವಾಗಿದೆ. ಪ್ರತಿಭಾ ಪುರಸ್ಕಾರದಂತಹ ಅರ್ಥಪೂರ್ಣ ಸಮಾರಂಭದಲ್ಲಿ ಪ್ರತಿಭಾನ್ವಿತರನ್ನು ಗುರುತಿಸುವ ಕೆಲಸವಾಗಿದ್ದು ಶ್ಲಾಘನೀಯ ಎಂದರು. ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಪುತ್ರಪ್ಪ ಭಾವಿ ಉದ್ಘಾಟಿಸಿ ಮಾತನಾಡಿ, ವಿವಿಧ ಪ್ರದೇಶಗಳಿಂದ ಆಗಮಿಸಿದ ಪ್ರತಿಭಾ ಪುರಸ್ಕøತರ ಶ್ರೇಯೋಭಿವೃದ್ಧಿಗೆ ಸಂಘ ಹೆಚ್ಚು ಕಾಳಜಿ ವಹಿಸಿ ಸಮಾರಂಭಕ್ಕೆ ಅಣಿಯಾಗಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳುತ್ತಿರುವುದು ಸುಯೋಗ ಎಂದರು. ಗುಲಬರ್ಗಾ ಹಟಗಾರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಮಲ್ಲಪ್ಪ ನಿಂಬೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಸೊನ್ನದ ವೇದಿಕೆ ಮೇಲಿದ್ದರು. ಸಂಘಕ್ಕೆ ಆರ್ಥಿಕವಾಗಿ ಸಹಾಯಮಾಡಿದ ಕ್ಷೀರಾಲಿಂಗ ರೂಗಿ, ಶಾಂತಮಲ್ಲಪ್ಪ ಜೇವೂರ ಮತ್ತು ಚನ್ನಮಲ್ಲಪ್ಪ ನಿಂಬೇಣಿ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಬುರಗಿ ಜಿಲ್ಲೆಯ 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಸತೀಶ ಜಮಖಂಡಿ ಸ್ವಾಗತಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ರಾವ ಬಹಾದ್ದೂರ ರೂಗಿ ಪ್ರಾಸ್ತಾವಿಕವಾಗಿ ಮಾತನಾಡಿದದರು. ಪತ್ರಕರ್ತ ಸಂಗಮನಾಥ ರೇವತಗಾಂವ ನಿರೂಪಿಸಿದರು. ಸಂಚಾಲಕ ಶಿವಲಿಂಗಪ್ಪ ಅಲಮದ ವಂದಿಸಿದರು. ಶ್ರವಣಕುಮಾರ ಮುನ್ನೋಳ್ಳಿ, ಬಸವರಾಜ ಕನಕಾ, ರಾಜಕುಮಾರ ಮುನ್ನೋಳ್ಳಿ, ರಾಚಣ್ಣ ಚಂದಾ, ಶಾಂತಕುಮಾರ ಗೌರ, ಚಂದ್ರಕಾಂತ ಮುನ್ನೋಳ್ಳಿ, ಮಲ್ಲಪ್ಪ ಝಿಳ್ಳಿ, ಚಂದ್ರಪ್ಪ ಬುಕ್ಕಾ, ಸೂರ್ಯಕಾಂತ ಕಾಬಣೆ, ಮಲ್ಲಿಕಾರ್ಜುನ ಹೊಸಮನಿ, ಸಂಘದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಹಟಗಾರ ಸಮಾಜದ ಬಾಂಧವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.