ಮಕ್ಕಳ ದಿನಾಚರಣೆ ಆಚರಣೆ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.25: ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ (ಬಾಲಕಿಯರ) ಶಾಲೆಯಲ್ಲಿ ಗುರುವಾರ ಮಕ್ಕಳ ದಿನಾಚರಣೆ ಆಚರಿಸಿದರು.
ಶಾಲೆಯ ಮಕ್ಕಳು ವಿವಿಧ ಭಾರತೀಯ ವೀರ ವನಿತಿಯರ ಛದ್ಮವೇಷಗಳನ್ನು ಧರಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನವನ್ನು ಅಲಂಕರಿಸಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜವಾಹರಲಾಲ್ ನೆಹರು ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಮತ್ತು ಮಕ್ಕಳೊಂದಿಗೆ ಅವರು ಮಕ್ಕಳೊಡನೆ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರು, ಮಕ್ಕಳಂತೆಯೇ ಮಾತನಾಡಿ,ಆಟವಾಡಿ ನಲಿದು ಆನಂದಪಡುತಿದ್ದರು ನೆಹರು ಅವರನ್ನು ಚಾಚಾ ಎಂದು ಮಕ್ಕಳು ಕರೆಯುತ್ತಿದ್ದರು ಹಾಗೂ ನೆಹರು ಅವರ ಕೊಡುಗೆ ದೇಶಕ್ಕೆ ಅಪಾರವಾದಿದ್ದು ಅದ್ದರಿಂದ ನವೆಂಬರ್ 14 ನಮ್ಮ ದೇಶದ ಒಬ್ಬ ಮಹಾಪುರುಷರಾದ ಪಂಡಿತ ಜವಾಹರ್‌ಲಾಲ್ ನೆಹರು ಅವರ ಜನ್ಮದಿನ ಮಕ್ಕಳ ದಿನವನ್ನಾಗಿ ಅಂದಿನಿಂದ ಇಂದಿನವರೆಗೂ ಸಂಭ್ರಮದಿಂದ ಪ್ರತಿವರ್ಷ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಗುರು ಎಚ್.ಎಮ್. ಚಂದ್ರಶೇಖರ ಮಕ್ಕಳ ದಿನಾಚರಣೆ ಕುರಿತು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಇನ್ನಿತರ ಎಲಕ್ಟ್ರಾನಿಕ್‌ ಉಪಕರಣಗಳ ಕಡೆ ಹೆಚ್ಚಿನ ಸಮಯ ಕೊಟ್ಟು ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಗೆಯೇ ಮಕ್ಕಳ ಓದಿನ ವಿಚಾರದಲ್ಲೂ ಪೋಷಕರು ಸಹ ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ ಅದ್ದರಿಂದ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ಪೋಷಕರ ಕರ್ತವ್ಯ ಅವಶ್ಯಕತೆವಾಗಿದೆ ಹಾಗೂ ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ ಅವರನ್ನು ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ  ಪೋಷಿಸಬೇಕು ಎಂದು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಎ.ವೀರೇಶ ತಿಳಿಸಿದರು.
ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗುವನ್ನು ಸ್ವಂತವಾಗಿ ಓದಲು ಮನೆಯಲ್ಲಿ ಪೋಷಕರು ಮಕ್ಕಳನ್ನು ಪ್ರೇರೇಪಿಸಬೇಕು. ಓದುವ ಹವ್ಯಾಸವನ್ನು ಮಕ್ಕಳು ಬಾಲ್ಯದಲ್ಲಿ ರೂಡಿಸಿಕೊಳ್ಳದಿದ್ದರೆ ಪ್ರೌಢಾವಸ್ಥೆ ಯಲ್ಲಿ ಓದುವ ಹವ್ಯಾಸ ಹುಟ್ಟುಹಾಕುವುದು ಬಹಳ ಕಷ್ಟಕರವಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಕೆಲಸದ ಮಧ್ಯೆಯೂ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಒಳ್ಳೆಯದು.ಮಕ್ಕಳನ್ನು ಓದುವಂತೆ ಉತ್ತೇಜಿಸುವುದು,ಪ್ರೋತ್ಸಾಹ ನೀಡುವುದು, ಪ್ರಶ್ನಿಸುವುದು ಪೋಷಕರು ಮಕ್ಕಳಿಗೆ ಮೊದಲು ಮಾಡಬೇಕಾದ ಕೆಲಸವಾಗಿದೆ ಎಂದು ತೆಕ್ಕಲಕೋಟೆ ಕ್ಲಸ್ಟರ್ ನ ಸಿ.ಆರ್. ಪಿ ಮಹಮ್ಮದ್ ಫಯಾಜ್
ಹೇಳಿದರು.
ಮಕ್ಕಳು  ಹೊಸ ಉಡುಪುಗಳನ್ನು ಧರಿಸಿ ಸಿಹಿ ಊಟವನ್ನು ಮಾಡಿ ವಿವಿಧ ನೃತ್ಯಗಳನ್ನು ಮಾಡುವುದರ ಮೂಲಕ ಮಕ್ಕಳ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಿದರು.
ಶಾಲೆಯ ಸಹ ಶಿಕ್ಷಕ ಎಚ್.ಹಂಪಣ್ಣ ಹಾಗೂ ಅತಿಥಿ ಶಿಕ್ಷಕರು, ಎಸ್.ಡಿ.ಎಮ್. ಸಿ ಸದಸ್ಯರು ಮತ್ತು ಮಕ್ಕಳ ಪೋಷಕರು ಇದ್ದರು.