
ಕಲಬುರಗಿ,ಮಾ.4: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಅವರ ವೇತನ ಕಳೆದ ನಾಲ್ಕು ವರ್ಷಗಳಿಂದ ಬಿಡುಗಡೆಯಾಗಿಲ್ಲ. ಇದರಿಂದ ಅವರ ಮಕ್ಕಳ ಜೀವನ ಸಂಪೂರ್ಣ ಅತಂತ್ರವಾಗಿದೆ. ಅಲ್ಲದೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಕ್ಕಳನ್ನು ದತ್ತು ಪಡೆಯುವ ಭರವಸೆಯೂ ಹುಸಿಯಾಗಿದೆ. ಮಕ್ಕಳ ಭವಿಷ್ಯಕ್ಕೋಸ್ಕರ ಕೂಡಲೇ ತಡೆಹಿಡಿದ ಬಂಡೆ ಅವರ ವೇತನವನ್ನು ಬಿಡುಗಡೆ ಮಾಡಬೇಕು. ಇಲ್ಲದೇ ಹೋದಲ್ಲಿ ಒಂದು ವಾರದ ನಂತರ ಮಕ್ಕಳೊಂದಿಗೆ ಸೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಮಕ್ಕಳ ಪೋಷಕರಾದ ಹಣಮಂತ್ ಮರಡಿ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೆ ಅವರ ಇಬ್ಬರು ಮಕ್ಕಳಿಗೆ ನಾವೇ ಈಗ ಪೋಷಕರಾಗಿದ್ದೇವೆ. ದಿ. ಮಲ್ಲಿಕಾರ್ಜುನ್ ಬಂಡೆ ಅವರು ಕಳೆದ 2014ರ ಜನವರಿ 15ರಂದು ಹುತಾತ್ಮರಾದರು. ನಂತರದ ದಿನಗಳಲ್ಲಿ ಸರ್ಕಾರ ಅವರ ಅಂತಿಮ ವೇತನವನ್ನು ಅವರ ಕುಟುಂಬಕ್ಕೆ ನೀಡಬೇಕು ಎಂದು ಆದೇಶದಲ್ಲಿತಿಳಿಸಿದೆ. ಅದರಂತೆ 2016ರಿಂದ 2019ರ ಸೆಪ್ಟೆಂಬರ್‍ವರೆಗೆ ವೇತನ ನೀಡಿದ್ದು, 2019ರ ಅಕ್ಟೋಬರ್‍ದಿಂದ ಇಲ್ಲಿಯವರೆಗೆ ಸುಮಾರು ನಾಲ್ಕು ವರ್ಷಗಳವರೆಗೆ ಖಜಾನೆ-2ರ ನ ಎಪವೊಡ್ಡಿ ವೇತನ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಈ ವಿಷಯದ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ, ಈಶಾನ್ಯ ವಲಯ ಪೋಲಿಸ್ ಮಹಾ ನಿರೀಕ್ಷಕರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಪತ್ರ ವ್ಯವಹಾರ ಮಾಡಲಾಗಿದೆ. ಆದಾಗ್ಯೂ, ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಮಧ್ಯೆ, ಮಕ್ಕಳ ಪರೀಕ್ಷೆಯ ಸಂದರ್ಭದಲ್ಲಿ ಶೈಕ್ಷಣಿಕ ಶುಲ್ಕದ ನೋಟಿಸ್ ಶಾಲೆಗಳಿಂದ ಕಳಿಸಿದ್ದಾರೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಈ ವಿಷಯದ ಕುರಿತು ವಿಚಾರಿಸಿದಾಗ ನಮ್ಮ ಕಡೆಯಿಂದ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿದ್ದೇವೆ ಎಂದು ಕೈ ಚೆಲ್ಲಿ ಹೇಳುತ್ತಿದ್ದಾರೆ. ನಾವೂ ಸಹ ಸರ್ಕಾರಿ ನೌಕರರಾಗಿದ್ದು, ಬೆಂಗಳೂರಿಗೆ ಹೋಗಿ ಬರುವುದು ಸಹ ಕಷ್ಟಸಾಧ್ಯವಾಗಿದೆ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಬಾಕಿ ವೇತನ ಪಾವತಿ ಕುರಿತು ಮೇಲಾಧಿಕಾರಿಗಳ ಕಚೇರಿಯಿಂದ ಹಿಡಿದು ಕಳೆಗಿನ ಕಚೇರಿಯವರೆಗೆ ಒಬ್ಬರ ಮೇಲೆ ಒಬ್ಬರು ಹಾಕುತ್ತಾರೆ ಎಂದು ದೂರಿದ ಅವರು, ಮಕ್ಕಳನ್ನು ದತ್ತು ಪಡೆಯುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಆದಾಗ್ಯೂ, ಅವರ ಶೈಕ್ಷಣಿಕ ಶುಲ್ಕ ಕಟ್ಟುವುದು ಸಹ ಸಾಧ್ಯವಾಗುತ್ತಿಲ್ಲ. ಇಬ್ಬರೂ ಮಕ್ಕಳು ಅಪ್ಪಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಶುಲ್ಕ ಏನಿಲ್ಲ ಎಂದರೂ ಒಂದು ಲಕ್ಷ ರೂ.ಗಳಾಗುತ್ತದೆ. ಈ ಕುರಿತು ಸರ್ಕಾರವನ್ನು ಕೇಳಿದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹೇಳುತ್ತಾರೆ. ಇನ್ನು ಸರ್ಕಾರಿ ಶಾಲೆಯ ಶುಲ್ಕ 12000ರೂ.ಗಳನ್ನಾದರೂ ಪ್ರಿನ್ಸಿಪಾಲರ ಹೆಸರಿಗೆ ಕಳಿಸಲು ಕೋರಿದರೂ ಕಳಿಸುತ್ತಿಲ್ಲ. ಎಲ್ಲ ರೀತಿಯಿಂದಲೂ ಸರ್ಕಾರವು ಬಂಡೆ ಅವರ ಮಕ್ಕಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಲಿದೆ ಎಂದು ಅವರು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಮತಿ ರಮಾದೇವಿ ಗಂಡ ಹಣಮಂತ್ ಮರಡಿ ಹಾಗೂ ಬಂಡೆ ಅವರ ಇಬ್ಬರು ಮಕ್ಕಳು ಉಪಸ್ಥಿತರಿದ್ದರು.