ಮಕ್ಕಳ ಜತೆ ಗಾಂಜಾ ದಂದೆ ಮಹಿಳೆ ಸೆರೆ

ಬೆಂಗಳೂರು,ಮಾ.೨೮- ಜೈಲಿನಲ್ಲಿ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದ ಪತಿಯ ಸೂಚನೆ ಮೇರೆಗೆ ಗಾಂಜಾ ದಂದೆಯಲ್ಲಿ ಮೂವರು ಅಪ್ರಾಪ್ತ ಮಕ್ಕಳ ಜೊತೆ ತೊಡಗಿದ್ದ ಖತರ್ನಾಕ್ ಮಹಿಳೆಯೊಬ್ಬಳು ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಗಾಂಜಾ ದಂದೆಯಲ್ಲಿ ತೊಡಗಿ ಒಂದು ತಿಂಗಳ ಹಿಂದೆ ಜೆಜೆ ನಗರ ಪೊಲೀಸರಿಂದ ಬಂಧಿತನಾಗಿ ಜೈಲು ಪಾಲಾಗಿದ್ದ ಮುಜ್ಜು ಪತ್ನಿ ನಗ್ಮಾ,ಪತಿಯ ಸೂಚನೆಯಂತೆ ಗಾಂಜಾ ಸಾಗಿಸುವಾಗ ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಬಂಧಿತಳಿಂದ ೧೩ ಲಕ್ಷ ಮೌಲ್ಯದ ೨೬ ಕೆಜಿ ಗಾಂಜಾ ವಶಕ್ಕೆ ಪಡೆದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.
ಜೈಲಿಗೆ ಹೋಗಿರುವ ಪತ್ನಿ ಅಲ್ಲಿರುವ ಪತಿ ಇಬ್ಬರೂ ಶಿಕ್ಷೆ ಅನುಭವಿಸುತ್ತಿದ್ದು ಇಬ್ಬರೂ ಪರಪ್ಪನ ಅಗ್ರಹಾರ ಸೇರಿರುವ ಮಕ್ಕಳು ಅನಾಥರಾಗಿದ್ದಾರೆ. ಈ ಖತರ್ನಾಕ್ ದಂಪತಿಯು ತಮ್ಮ ಚಿಕ್ಕ ಮಕ್ಕಳನ್ನೇ ಬಳಸಿಕೊಂಡು ಗಾಂಜಾ ದಂದೆ ನಡೆಸುತ್ತಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಮಕ್ಕಳೇ ಅಸ್ತ್ರ:
ಆರೋಪಿ ಮುಜ್ಜು ವಿಶಾಖಪಟ್ಟಣದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದು ಖಚಿತ ಮಾಹಿತಿ ಆಧರಿಸಿ ಜೆಜೆ ನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದರು.
ಪತಿ ಬಳಿಕ ಫೀಲ್ಡ್?ಗೆ ಇಳಿದ ಪತ್ನಿ ಗಾಂಜಾ ಮಾರಾಟ ಮುಂದುವರೆಸಿ ಗಾಂಜಾ ತರಲು ತನ್ನ ಮೂವರು ಮಕ್ಕಳೇ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ. ೧,೩,೭ ವರ್ಷದ ಮೂವರು ಮಕ್ಕಳನ್ನು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಳೆ.
ಮಕ್ಕಳು, ತಾಯಿ ಜೊತೆ ಹೋಗಿ ಬ್ಯಾಗ್?ನಲ್ಲಿ ಗಾಂಜಾ ತಂದು ಡೀಲ್ ಮಾಡುತ್ತಿದ್ದರು ಎಂದು ಮಾಹಿತಿ ಬಯಲಾಗಿದ್ದು ಅವರಿಂದ. ೨೬ ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಗಾಂಜಾ ಎಲ್ಲಿಂದ:
ಆರೋಪಿ ನಗ್ಮಾ, ವಿಶಾಖಪಟ್ಟಣಕ್ಕೆ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿ ಒಂದು ದಿನ ಅಲ್ಲೇ ರೂಂ ಮಾಡಿಕೊಂಡು ಇದ್ದು ಮರು ದಿನ ಚೀಲದಲ್ಲಿ ಕಡಿಮೆ ಬೆಲೆಗೆ ಖರೀದಿಸಿದ ಗಾಂಜಾ ಸಮೇತ ಬೆಂಗಳೂರಿಗೆ ಬರುತ್ತಿದ್ದಳು.
ಮಕ್ಕಳು, ಬ್ಯಾಗ್ ಇರುತ್ತಿದ್ದರಿಂದ ಯಾರೂ ತಪಾಸಣೆ ಮಾಡುತ್ತಿರಲಿಲ್ಲ. ಕುಟುಂಬಸ್ಥರು ಹೋಗುತ್ತಿದ್ದಾರೆ ಎಂದು ಪೊಲೀಸರು ಸುಮ್ಮನಾಗುತ್ತಿದ್ದರು.
ಇದನ್ನೇ ಬಂಡವಾಳ ಮಾಡಿಕೊಂಡು ಬಸ್ ನಲ್ಲೆ ಗಾಂಜಾ ತಂದು ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದಳು. ಇದೇ ರೀತಿ ವಿಶಾಖಪಟ್ಟಣದಿಂದ ಕಳೆದ ಮಾ. ೨೦ ರಂದು ಗಾಂಜಾ ತಂದಿದ್ದಳು. ಕಲಾಸಿಪಾಳ್ಯ ಸರ್ಕಲ್ ನಲ್ಲಿ ನಿಂತಿದ್ದಾಗ ಬ್ಯಾಗ್ ಜೊತೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಬಂಧಿತಳಿಂದ ೧೩ ಲಕ್ಷ ಮೌಲ್ಯದ ೨೬ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.