ಮಕ್ಕಳ ಚಿಕಿತ್ಸೆ : ವೈದ್ಯರಿಗೆ ತರಬೇತಿ

Front page

ಬೆಂಗಳೂರು, ಜೂ.೯-ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗಲಬಹುದು ಎಂಬ ತಜ್ಞರ ಎಚ್ಚರಿಕೆ ಹಿನ್ನೆಲೆಯಲ್ಲಿ ಮಕ್ಕಳ ಚಿಕಿತ್ಸೆಗೆ ವೈದ್ಯರನ್ನು ಗುರುತಿಸಿ ಅವರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ನಡೆಸಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ನಗರದಲ್ಲಿಂದು ಹೊಸೂರು ರಸ್ತೆಯ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ಸಭಾಂಗಣದಲ್ಲಿ ಬಿಬಿಎಂಪಿ ವೈದ್ಯರು ಹಾಗೂ ಮಕ್ಕಳ ತಜ್ಞರಿಗೆ ಹಮ್ಮಿಕೊಂಡಿದ್ದ, ಮಕ್ಕಳಲ್ಲಿ ಕೋವಿಡ್-೧೯ ಸೋಂಕು ನಿರ್ವಹಣೆಯ ತರಬೇತಿ ಹಾಗೂ ಸಿಮ್ಯೂಲೇಷನ್ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಚಿಕಿತ್ಸೆಗೆ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಎಂಬಿಬಿಎಸ್ ಓದಿರುವ ಹಾಗೂ ಇತರ ವೈದ್ಯಕೀಯ ತಜ್ಞರನ್ನು ನಿಯುಕ್ತಿಗೊಳಿಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲು ಈಗಲೇ ಕ್ರಮ ವಹಿಸಿದ್ದೇವೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿಯೇ ೨೫ ಲಕ್ಷ ಜನ ಮಕ್ಕಳಿದ್ದು, ಅವರಿಗೆ ಅಗತ್ಯ ಆರೋಗ್ಯ ಸೇವೆ ನೀಡುವ ಗುರಿ ನಮ್ಮ ಮೇಲಿದೆ.ಇದಕ್ಕಾಗಿ ಯಾರು ಎಂಬಿಬಿಎಸ್ ಮಾಡಿದ್ದಾರೆ ಹಾಗೂ ಇತರೆ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಕಲೆಹಾಕಿ, ಅವರಿಗೆ ಮಕ್ಕಳಿಗೆ ಕೋವಿಡ್ ಬಂದರೆ ಚಿಕಿತ್ಸೆ ನೀಡುವ ತರಬೇತಿ ನೀಡುತ್ತಿದ್ದೇವೆ ಎಂದರು.
ಮಕ್ಕಳಿಗೆ ಚಿಕಿತ್ಸೆ ನೀಡುವುದು ಒಂದು ಸವಾಲು ಆಗಿದೆ.ಅವರನ್ನು ತಾಯಿ ಹೃದಯದಿಂದ ಚಿಕಿತ್ಸೆ ಮಾಡಬೇಕಾಗಿದೆ. ಇನ್ನು, ಯಾವುದೇ ತಂದೆ ತಾಯಿ ಮಗುವನ್ನು ಬಿಟ್ಟು ಇರುವುದಿಲ್ಲ. ಅವರು ಸಹ ಆಸ್ಪತ್ರೆ ವಾರ್ಡ್ ನಲ್ಲಿ ಇರಬೇಕಾಗುತ್ತದೆ. ಜತೆಗೆ ಮಕ್ಕಳಿಗೆ ನೀಡುವ ಔಷಧಿಗಳು ಬೇರೆ ಬೇರೆಯಾಗಿದೆ. ಹಾಗಾಗಿ, ಇದನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ರೂಪಿಸಲಾಗುತ್ತದೆ ಎಂದರು.

ಸಹಾಯವಾಣಿ
ಮಕ್ಕಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಹಲವಾರು ಕೇಂದ್ರಗಳಿವೆ. ಇವರಿಗೆ ಸಲಹೆ ನೀಡಲು ಟೆಲಿಮೆಡಿಸನ್ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದ್ದು, ಸಹಾಯವಾಣಿಯನ್ನು ಆರಂಭಿಸಿ ತಜ್ಞರ ಮೂಲಕ ಸಲಹೆ-ಸೂಚನೆಗಳನ್ನು ನೀಡಲಾಗುವುದು ಎಂದರು.
ಮಕ್ಕಳಿಗೆ ಕೋವಿಡ್ ಬಂದರೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಗುರುತಿಸುವ ಕೆಲಸವೂ ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ನಿಮ್ಹಾನ್ಸ್ ನಿರ್ದೇಶಕ ಡಾ.ಸತೀಶ್ ಚಂದ್ರ, ನಿಮ್ಹಾನ್ಸ್ ಕುಲಸಚಿವ ಡಾ.ಶಂಕರನಾರಾಯಣರಾವ್, ವಲಯ ಆಯುಕ್ತೆ ತುಳಸಿ ಮದ್ದಿನೇನಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.