ಮಕ್ಕಳ ಗುಣಾತ್ಮಕ ಕಲಿಕೆಗೆ ವಿದ್ಯಾಗಮ ಸಹಕಾರಿ

ಮಧುಗಿರಿ, ಸೆ. ೧೭- ವಿದ್ಯಾಗಮ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಠಾನಗೊಳಿಸಬೇಕು. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಇದರ ಅನುಷ್ಠಾನಕ್ಕೆ ಎಲ್ಲರೂ ಶ್ರಮವಹಿಸಿ ಈ ಜಿಲ್ಲೆಯ ಮಕ್ಕಳ ಗುಣಾತ್ಮಕ ಕಲಿಕೆಗೆ ಸಹಕರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿಯ ಸಹ ನಿರ್ದೇಶಕ ಎನ್. ಕೆಂಚೇಗೌಡ ಹೇಳಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ನಾಲ್ಕು ತಾಲ್ಲೂಕಿನ ಅಧಿಕಾರಿಗಳಿಂದ ವಿದ್ಯಾಗಮ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದ್ದು, ದೇಶದ ಎಲ್ಲ ರಾಜ್ಯಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಮತ್ತು ಯಶಸ್ಸಿಗೆ ಎಲ್ಲರೂ ಶ್ರಮವಹಿಸಬೇಕು ಎಂದು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲ ಅಧಿಕಾರಿಗಳನ್ನು ೧೬ ತಂಡಗಳಾಗಿ ರಚಿಸಿ ಮಧುಗಿರಿ ತಾಲ್ಲೂಕಿನ ೧೬ ವಿದ್ಯಾಗಮ ಕೇಂದ್ರಗಳಿಗೆ ಭೇಟಿ ನೀಡಲು ಸೂಚಿಸಿ ತಾವೂ ಸಹ ಖುದ್ದು ವಿದ್ಯಾಗಮ ನಡೆಯುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ೧೬ ತಂಡದವರಿಂದ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ ಮತ್ತೆ ಸಭೆ ಕರೆದು ಮಾಹಿತಿ ಪಡೆದರು.
ತಂಡಗಳಲ್ಲಿ ತೆರಳಿದ ಅಧಿಕಾರಿಗಳು ತಮ್ಮ ಭೇಟಿ ನೀಡಿರುವ ಕೇಂದ್ರಗಳಲ್ಲಿ ವಿದ್ಯಾಗಮ ಕಾರ್ಯಕ್ರಮ ನಡೆಯುತ್ತಿರುವ, ಶಿಕ್ಷಕರು ರೂಪಿಸಿಕೊಂಡಿರುವ ಕಲಿಕಾ ಚಟುವಟಿಕೆಗಳು ಮತ್ತು ಮಕ್ಕಳ ಕಲಿಕೆಯ ಪರಿಶೀಲನಾ ವರದಿಯನ್ನು ಮಂಡಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಧುಗಿರಿ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ, ಡಯಟ್ ಪ್ರಾಂಶುಪಾಲರಾದ ವೈ.ಎನ್. ರಾಮಕೃಷ್ಣಯ್ಯ, ಡಿವೈಪಿಸಿ ನರೇಂದ್ರಕುಮಾರ್, ನಾಲ್ಕು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರು, ಎಪಿಸಿ ಮತ್ತು ಡಯಟ್‌ನ ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು.