ಮಕ್ಕಳ ಕಾಳಜಿ ಪೋಷಕರ ಕರ್ತವ್ಯ”


ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.31. ಶಾಲೆಯಲ್ಲಿ ಇರುವವರೆಗೆ ಮಾತ್ರ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳಬಹುದು. ನಂತರ ಮನೆಯಲ್ಲಿರುವಾಗ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಮುಖ್ಯಗುರು ಫರ್ವೇಜ್‍ಅಹಮ್ಮದ್ ಹೇಳದರು. ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜು.29 ಶುಕ್ರವಾರ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಸಭೆಗೆ ಹಾಜರಾದ ವಿದ್ಯಾರ್ಥಿಗಳ ಪೋಷಕರನ್ನು ಉದ್ದೇಶಿಸಿ ಮಾತನಾಡಿ ನಮ್ಮ ಶಾಲೆಗೆ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕು. ಎಲ್ಲಾ ಮಕ್ಕಳೂ ಪಾಸಾಗಬೇಕು. ಗ್ರಾಮದಲ್ಲಿ ನಮ್ಮ ಶಾಲೆ ಒಳ್ಳೆಯ ಹೆಸರು ಪಡೆಯಬೇಕೆನ್ನುವ ತವಕದಿಂದ ನಾವು ಪಾಠಗಳನ್ನು ಮಾಡುತ್ತಿದ್ದೇವೆ. ಶಿಕ್ಷಕ ವೃಂದದಲ್ಲಿ ಉತ್ತಮ ಹೊಂದಾಣಿಕೆ ಮನೋಭಾವದಲ್ಲಿ ಎಲ್ಲಾ ಶಿಕ್ಷಕರು ಇಂತಿಷ್ಟು ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಉತ್ತಮ ವಿದ್ಯಾಭ್ಯಾಸದ ಕಾಳಜಿ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ನಮ್ಮ ಜೊತೆಗೆ ಇರುವಷ್ಟುಕಾಲ ಅವರ ಕಾಳಜಿ ಮಾಡುತ್ತೇವೆ. ನಂತರದ ಹಂತದಲ್ಲಿ ನಿಮ್ಮ ಮಕ್ಕಳು ಮನೆಗೆ ಬಂದಾಗ ಅವರ ಸಂಪೂರ್ಣ ಕಾಳಜಿ ತೆಗೆದುಕೊಂಡು ಬೆಳಿಗ್ಗೆ 3ತಾಸು, ಸಂಜೆ 3ತಾಸು ಓದಿಕೊಳ್ಳುವಂತೆ ಮಾಡಿದರೆ ಸಾಕು ಎಲ್ಲಾ ಮಕ್ಕಳೂ ಪಾಸಾಗುತ್ತಾರೆ. ಈ ವಿಷಯದಲ್ಲಿ ನಮಗೆ ಸಹಕರಿಸಬೇಕೆಂದು ತಿಳಿಸಿದರು. ಇದೇವೇಳೆ ಎಸ್‍ಡಿಎಂಸಿ ಅಧ್ಯಕ್ಷ ಬಕಾಡೆ ಈರಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ, ಎಲ್ಲರೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಪ್ರತಿದಿನ ಅವರು ವಿದ್ಯಾರ್ಥಿಗಳ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. 8ತಿಂಗಳಲ್ಲಿ 2ಸಲ ಕರೆಯುವ ಪೋಷಕರ ಸಭೆಗೆ ಬಂದು ನಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆಯುವ ಸೌಜನ್ಯ ತೋರದಿರುವುದು ಬೇಸರವೆನಿಸಿದೆ. 107 ವಿದ್ಯಾರ್ಥಿಗಳಿದ್ದಾರೆ. ಪೋಷಕರ ಸಭೆಗೆ ಕೇವಲ 25, 30 ಜನ ಬಂದಿದ್ದಾರೆ. ಮುಂದಿನ ಸಭೆಗಾದರೂ ಹೆಚ್ಚು ಪೋಷಕರು ಬರಬೇಕು ಶಿಕ್ಷಕರು ಹೇಳುವ ವಿಷಯಗಳಂತೆ ಅವರಿಗೆ ಸಹಕರಿಸಬೇಕೆಂದು ಕೋರಿದರು. ಸಹ ಶಿಕ್ಷಕಿ ನೈಮುನ್ನಿಸಾ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಕ ಕೃಷ್ಣಮೂರ್ತಿ, ಸಹ ಶಿಕ್ಷಕರಾದ ಶಿವಲೀಲ, ಕವಿತ, ದೊಡ್ಡಬಸಪ್ಪ, ರಂಗಪ್ಪ, ಹಾಗೂ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.