ಮಕ್ಕಳ ಕವಿಗೆ ಸನ್ಮಾನಿಸಿ ದೀಪಾವಳಿ ಹಬ್ಬದ ಸಂಭ್ರಮ

ಕಲಬುರಗಿ.ನ.04:ಬೆಳಕಿನ ಹಬ್ಬ ದೀಪಾವಳಿಯನ್ನು ಖ್ಯಾತ ಮಕ್ಕಳ ಸಾಹಿತಿ ಎಂದೇ ಹೆಸರಾದ ಪಕ್ಕಾ ಮಕ್ಕಳ ಮನಸ್ಸಿನ ಪ್ರಬುದ್ಧ ಹಾಗೂ ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ್ ಅವರ ಗೋದುತಾಯಿ ನಗರದ ನಿವಾಸದಲ್ಲಿ ಗುರುವಾರ ಅವರ ಅಭಿಮಾನಿ ಬಳಗದವರು ಸನ್ಮಾನಿಸುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಸಾಹಿತಿ ಮನೋಹರ್ ಮರಗುತ್ತಿ ಅವರು ಸಾಹಿತಿ ಎ.ಕೆ. ರಾಮೇಶ್ವರ್ ಅವರ ಕುರಿತು ರಚಿಸಿದ ಕವನವನ್ನು ಸುಂದರವಾದ ಫ್ರೇಮ್‍ನಲ್ಲಿ ಅಚ್ಚುಕಟ್ಟಾಗಿ ಅಚ್ಚು ಹಾಕಿಸಿ ಅದನ್ನು ಸವಿನೆನಪಿನ ಕಾಣಿಕೆಯಾಗಿ ನೀಡಿ, ಕವನವನ್ನು ಪ್ರಸ್ತುತಪಡಿಸಿದ ಕ್ಷಣ ಹೃದಯಸ್ಪರ್ಶಿಯಾಗಿತ್ತು.
ಕಿರಿಯರಿಗೆ, ಉದಯೋನ್ಮುಖರಿಗೆ ದಾರಿ ದೀಪವಾಗಿರುವ ಬೆಳಕು ಅವರು, ಅವರ ಬದುಕು, ಬರಹವನ್ನು ಕುರಿತು ದೀಪಾವಳಿಯ ಕರ್ಚಿಕಾಯಿ ಚಪ್ಪರಿಸುವುದರೊಂದಿಗೆ ಚರ್ಚಿಸಿದ್ದು ಸಹ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಭೀಮರಾಯ್ ಹೇಮನೂರು, ಡಾ. ಕೆ.ಎಸ್. ಬಂಧು, ಧರ್ಮಣ್ಣ ಧನ್ನಿ, ಮನೋಹರ್ ಮರಗುತ್ತಿ ಸೇರಿದಂತೆ ಸಮಾನ ಮನಸ್ಕರು ಪಾಲ್ಗೊಂಡಿದ್ದರು.