ಮಕ್ಕಳ ಕಳ್ಳರ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ: 112 ಸಹಾಯವಾಣಿಗೆ ಕರೆ ಮಾಡಿ

ಕಲಬುರಗಿ,ಸೆ.15-ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಸುಳ್ಳು ವದಂತಿ ಹರಿದಾಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ದೇಶದ ವೀಡಿಯೋಗಳನ್ನು ಬಿತ್ತರಿಸಲಾಗುತ್ತಿದೆ. ಇದರಿಂದ ಆತಂಕಗೊಂಡ ಸಾರ್ವಜನಿಕರು ಅಮಾಯಕ ವ್ಯಕ್ತಿಗಳನ್ನು ತಡೆದು ಹಲ್ಲೆ ಮಾಡುವ ಘಟನೆಗಳು ಬೆಳಕಿಗೆ ಬಂದಿವೆ. ಆದ್ದರಿಂದ ಸಾರ್ವಜನಿಕರು ತಮ್ಮ ನಗರ, ಗ್ರಾಮ, ಬಡಾವಣೆ ಮತ್ತು ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ. 112ಗೆ ಕರೆ ಮಾಡಿದ ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಬಂದು ಕೂಲಂಕುಶವಾಗಿ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ ಅವರು ತಿಳಿಸಿದ್ದಾರೆ.
ಮಕ್ಕಳ ಕಳ್ಳತನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.