ಮಕ್ಕಳ ಕಲಿಕೆಯಲ್ಲಿ ಪಾಲಕರ ಕೊಡುಗೆ ದೊಡ್ಡದು

ಭಾಲ್ಕಿ:ಆ.27:ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕರ ಜತೆಗೆ ಪಾಲಕರ ಕೊಡುಗೆ ಬಹುದೊಡ್ಡದಾಗಿರುತ್ತದೆ ಎಂದು ಖಡಕೇಶ್ವರ ವಿದ್ಯಾ ಸಂಸ್ಥೆಯ ಕೋಶಾಧ್ಯಕ್ಷ ಪ್ರಭುರಾವ ಧೂಪೆ ಹೇಳಿದರು. ಪಟ್ಟಣದ ಲೆಕ್ಚರ್ ಕಾಲೋನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನೆಯಲ್ಲಿ ಮಕ್ಕಳು ನಿರಂತರವಾಗಿ ಪಾಲಕರನ್ನು ಹೆಚ್ಚು ಅನುಕರಣೆ ಮಾಡುತ್ತಾರೆ. ಮಕ್ಕಳ ಮನಸ್ಸಿನಲ್ಲಿ ಕಲಿಕೆಯ ಪೂರಕ ವಾತವರಣ ಕಲ್ಪಿಸುವುದರ ಜತೆಗೆ ಶಿಸ್ತು, ಉತ್ತಮ ಸಂಸ್ಕಾರ ಕಲಿಸಿಕೊಡುವ ಕೆಲಸ ಆಗಬೇಕು ಎಂದರು.

ಈ ಸಂಸ್ಥೆಯಲ್ಲಿ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಾಲಕರು ಹೆಚ್ಚೆಚ್ಚು ಮಕ್ಕಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದರು.

ಸಂಸ್ಥೆಯ ಅಧ್ಯಕ್ಷ ಸುಧೀರ ನಾಯಕ ಅಧ್ಯಕ್ಷತೆ ವಹಿಸಿದರು. ಮುಖ್ಯಗುರು ಆನಂದ ಕಲ್ಯಾಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕ ಅಶೋಕ ಲೋಖಂಡೆ, ಶಿಕ್ಷಕರಾದ ಉದಯ ಜೋಶಿ, ದಿಲೀಪ ಘಂಟೆ, ಪ್ರಕಾಶ ರುದನೂರೆ, ಅಂಜಲಿ ಜೋಶಿ, ಗೌರಮ್ಮ ಮಜಗೆ, ಜಯಪ್ರಕಾಶ ಸಹಾನೆ ಇದ್ದರು.