ಮಕ್ಕಳ ಕಲಿಕೆಗೆ ಆಸಕ್ತಿ ವಹಿಸಿ : ಎಸ್.ರಾಮಪ್ಪ.


ಸಂಜೆವಾಣಿವಾರ್ತೆ
ಹರಪನಹಳ್ಳಿ.ಫೆ.7; ಗ್ರಾಮೀಣ ಭಾಗದಲ್ಲಿ ಇಂದು ಶೈಕ್ಷಣಿಕ ಜಾಗೃತಿ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಮಕ್ಕಳ ಕಲಿಕೆಯ ಕುರಿತು ಪೋಷಕರು ಆಸಕ್ತಿ ವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ರಾಮಪ್ಪ ತಿಳಿಸಿದರು.
ತಾಲೂಕಿನ ಅರಸಿಕೇರಿ ಜ್ಞಾನ ಜ್ಯೋತಿ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಿ.ರಾಜಶೇಖರ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳು ಸಾಕಷ್ಟು ಪ್ರತಿಭಾವಂತರಿದ್ದು, ಹೆಚ್ಚಿನ ಪ್ರೋತ್ಸಾಹ ದೊರೆತರೆ ನಗರ ಪ್ರದೇಶದ ಮಕ್ಕಳಿಗೆ ಕಡಿಮೆ ಇಲ್ಲದಂತೆ ಸಾಧನೆ ಮಾಡುತ್ತಾರೆ, ಆದ್ದರಿಂದ ಹಳ್ಳಿಗಾಡಿನ ಮಕ್ಕಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು.
ಈ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತದೆ, ಇಲ್ಲಿ ಓದಿದ ಮಕ್ಕಳು ಉನ್ನತ ಹುದ್ದೆಗೆ ಹೋಗಿರುವುದು ಸಂತಸದ ಸಂಗತಿ ಎಂದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ತೌಡೂರಿನ ಟಿ.ಎಂ.ಗುರುಮೂರ್ತಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲಾ ಮಕ್ಕಳು ಕನ್ನಡವನ್ನು ಕಡ್ಡಾಯ ಕಲಿಯಿರಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಕಾರ್ಯದರ್ಶಿ ಲಕ್ಷ್ಮಿದೇವಿ ಅಣ್ಣಪ್ಪ, ಶಿಕ್ಷಕರ ಪತ್ತಿನ ಬ್ಯಾಂಕಿನ ಅಧ್ಯಕ್ಷ ಬಿ.ಚಂದ್ರಮೌಳಿ, ಮುಖ್ಯ ಶಿಕ್ಷಕ ಎಂ.ಜಗದೀಶಯ್ಯ, ಶಿಕ್ಷಕರಾದ ಪೋಮ್ಯನಾಯ್ಕ, ವೈ.ರಾಜು, ಸಿಎಚ್‍ಎಂ ನಮಃಶಿವಾಯ, ಪಿ.ರೇವಣಸಿದ್ದಪ್ಪ ಸೇರಿದಂತೆ ಇತರರು ಇದ್ದರು.