ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕಲಿಕಾ ಚೇತರಿಕೆ ಅನುಷ್ಟಾನ ಅಗತ್ಯ

ಚಿತ್ರದುರ್ಗ.ಮೇ.೧೪; ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕಲಿಕಾ ಚೇತರಿಕೆ ಉಪಕ್ರಮ ಪೂರಕವಾಗಿದ್ದು ಶಿಕ್ಷಕರು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡುವುದರ ಮೂಲಕ ಮಕ್ಕಳಲ್ಲಿ ಸಮಗ್ರ ಬೆಳವಣಿಗೆಯುಂಟು ಮಾಡಬೇಕು ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ಸಮಗ್ರ ಶಿಕ್ಷಣ ಕರ್ನಾಟಕ, ಡಿ.ಎಸ್.ಇ.ಆರ್.ಟಿ, ಡಯಟ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಹೊಸದುರ್ಗ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ನಲಿಕಲಿ ಶಿಕ್ಷಕರಿಗೆ ಆಯೋಜಿಸಿದ್ದ ಕಲಿಕಾ ಚೇತರಿಕೆ ಉಪಕ್ರಮ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.. ಕಳೆದ ವರ್ಷಗಳಲ್ಲಿ ಕೋವಿಡ್‌ನಿಂದಾಗಿ ಮಕ್ಕಳಲ್ಲಿ ಕಲಿಕಾ ಕೊರತೆ ಉಂಟಾಗಿದೆ. ಭಾಷಾ ಕೌಶಲ್ಯಗಳು, ಕೋರ್ ವಿಷಯಗಳಲ್ಲಿ ಸಾಮರ್ಥ್ಯ ಗಳಿಕೆಯಲ್ಲಿ ಹಿನ್ನೆಡೆಯಾಗಿದ್ದು ಅದನ್ನು ಸರಿದೂಗಿಸಲು ಈ ಕಾರ್ಯಕ್ರಮ ಪೂರಕವಾಗಿದ್ದು ಶಿಕ್ಷಣ ಇಲಾಖೆಯ ಆಶಯದಂತೆ ಶಿಕ್ಷಕರು ಬದ್ಧತೆಯಿಂದ ತೊಡಗಿಸಿಕೊಂಡು ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು. ಡಯಟ್‌ನ ಹಿರಿಯ ಉಪನ್ಯಾಸಕ ಸಯ್ಯದ್ ಮೋಸಿನ್ ಮಾತನಾಡಿ, ಕಲಿಕಾ ಚೇತರಿಕೆ ಉಪಕ್ರಮ ಪ್ರಸ್ತುತ ಶೈಕ್ಷಣಿಕ ವರ್ಷಪೂರ್ತಿ ನಡೆಯಲಿದ್ದು ಇಲಾಖೆಯಿಂದ ನೀಡಿರುವ ಕಲಿಕಾ ಹಾಳೆಗಳನ್ನು ಬಳಸಿ ಮಕ್ಕಳ ಸಾಮರ್ಥ್ಯ ವೃದ್ಧಿ ಮಾಡಬೇಕು. ಕಲಿಕಾ ಹಾಳೆಗಳ ಮೂಲಕವೇ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನ ಮಾಡಿ ಮೌಲ್ಯಾಂಕನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು. ಬಿ.ಇ.ಓ ಎಲ್.ಜಯಪ್ಪ, ಬಿ.ಆರ್.ಸಿ ಮೌನೇಶ್, ಡಯಟ್ ಉಪನ್ಯಾಸಕ ಎಸ್.ಬಸವರಾಜು, ಶಿಕ್ಷಣ ಸಂಯೋಜಕ ಯತೀಶ್, ಬಿ.ಆರ್.ಪಿ ತಿಪ್ಪೇಶಪ್ಪ, ಸಂಪನ್ಮೂಲ ವ್ಯಕ್ತಿಗಳಾದ ಅಜೀಮುಲ್ಲಾ, ಮಂಜುಳಾ, ಕರಿಬಸಪ್ಪ, ಸೋಮಶೇಖರ್, ಮಂಜುನಾಥ್, ಮಲ್ಳೇಶಪ್ಪ, ಉಮೇಶ್, ಚನ್ನಬಸಪ್ಪ ಮತ್ತಿತರರಿದ್ದರು.