ಮಕ್ಕಳ ಕನ್ನಡ ಪುಸ್ತಕಗಳ ಆಭಾವ: ಡಾ. ಪಾಟೀಲ ವಿಷಾದ


ಧಾರವಾಡ ಮಾ.29-: ಕನ್ನಡದ ಶಾಲಾ ಮಕ್ಕಳಿಗೆ ಮನಸ್ಸಿಗೆ ಉಲ್ಲಾಸ ತರುವ ರಂಜನೆ ಜೊತೆಗೆ ಜ್ಞಾನದ ಅರಿವು ವಿಸ್ತರಿಸುವ ಆಕರ್ಷಕ ಪುಸ್ತಕಗಳು ಇಲ್ಲವೆ ಇಲ್ಲ ಎನ್ನುವಷ್ಟು ದುರಂತ ಪರಿಸ್ಥಿತಿ ಬಂದಿದೆ ಎಂದು ಹೇಳಿದ ಮಕ್ಕಳ ಸಾಹಿತಿ ಹಾಗೂ ಆಕಾಶವಾಣಿಯ ವಿಶ್ರಾಂತ ಹಿರಿಯ ಅಧಿಕಾರಿ ಡಾ. ಆನಂದ ಪಾಟೀಲ ಈ ಕುರಿತು ವಿಷಾದಿಸಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಪ್ರೊ. ಎಸ್. ಎಲ್. ಸಂಗಮ ದತ್ತಿ ಉಪನ್ಯಾಸ ಮಾಲೆ-5 ಅಂಗವಾಗಿ `ಮಕ್ಕಳ ಕೈಗೆ ಪುಸ್ತಕ’ ಎಂಬ ವಿಷಯದ ಮೇಲೆ ಅವರು ಉಪನ್ಯಾಸ ನೀಡುತ್ತಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಸರಕಾರಿ ಆಶ್ರಯದ ಈ ಸಂಘಟನೆಗಳಲ್ಲಿ ಮಕ್ಕಳ ಪುಸ್ತಕಗಳ ಪ್ರಕಟಣೆಗೆ ಆಸ್ಪದವೆ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸಂಘಟಿಸುವ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮಕ್ಕಳ ಪುಸ್ತಕಗಳ ಸ್ಥಾನ ನಗಣ್ಯ ಎನ್ನುವಂತಾಗಿದೆ. ಸರಕಾರಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳೂ ಸಹ ಸ್ಪರ್ಧಾತ್ನಕವಾಗಿ ಇಂಗ್ಲೀಷ ಶಾಲೆಯ ಮಕ್ಕಳಂತೆ ಮುಂದೆ ಬರುವಲ್ಲಿ ಅವರ ಅರಿವಿನ ವಿಸ್ತಾರವನ್ನು ಹೆಚ್ಚಿಸುವ, ಸುಮ್ಮನೆ ಮಕ್ಕಳನ್ನು ಆಕರ್ಷಿಸಿ, ಓದಿಸಿಕೊಂಡು ಹೋಗುವಂತ ಪುಸ್ತಕಗಳು ಬೇಕು ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಯಾಗಿ ಇಂಗ್ಷೀಷ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಅತ್ಯಾಕರ್ಷಕ ವರ್ಣಮಯ ಹಾಗೂ ಮುದ್ರಣ ವಿನ್ಯಾಸವುಳ್ಳ ಪುಸ್ತಕಗಳು ದಂಡಿಯಾಗಿ ಸಿಗುತ್ತಿವೆ. ಅವುಗಳನ್ನು ಪಾಲಕರು ಮಕ್ಕಳ ಅಪೇಕ್ಷೆಯಂತೆ ಖರೀದಿಸಿ ನೀಡುತ್ತಾರೆ. ಆದರೆ ಇಂತಹ ಭಾಗ್ಯ ಕನ್ನಡದ ಮಕ್ಕಳಿಗೆ ಇಲ್ಲದಿರುವುದು ಶೋಚನಿಯ. ಪುಸ್ತಕಗಳನ್ನು ಮುದ್ರಿಸುವ ಖಾಸಗಿ ವ್ಯವಸ್ಥೆಯು ಸಹ ಪ್ರಬಲಗೊಳ್ಳದೆ ಇರುವುದು ಇನ್ನಷ್ಟು ಶೋಚನೀಯ ಎಂದು ಡಾ. ಆನಂದ ಪಾಟೀಲ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಹಿರಿಯ ಗ್ರಂಥಾಲಯಾಧಿಕಾರಿ ಜಿ. ಬಿ. ಹೊಂಬಳ ಅವರು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನದ ಪ್ರಕ್ರಿಯೆ ಅವರ ಹದಿವಯದಿಂದಲೆ ಪ್ರಾರಂಭಗೊಳ್ಳುತ್ತದೆ. ಇಂತ ಕಾಲಘಟ್ಟದಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಒದಗಿಸುವ ಕಾರ್ಯ ಆಗಬೇಕಾಗಿದೆ ಎಂದರು. ಪ್ರತಿ ಶಾಲೆಗೆ ಗ್ರಂಥಾಲಯ ಇರುವುದು ಅವಶ್ಯಕ. ಅದರಂತೆ ಮಕ್ಕಳನ್ನು ಹೊಸ ಓದಿಗೆ ಹಚ್ಚುವಲ್ಲಿ ಶಿಕ್ಷಕರ ಜವಾಬ್ದಾರಿಯು ಹೆಚ್ಚಿನದು ಎಂದು ಹೊಂಬಳ ಅವರು ಹೇಳಿದರು.
ಪ್ರೊ. ಎಸ್. ಎಲ್. ಸಂಗಮ ಅವರು ಈ ದತ್ತಿ ಸ್ಥಾಪನೆಗೆ ನೆರವಾದ ತಮ್ಮ ಸಂಶೋಧನಾ ವಿದ್ಯಾರ್ಥಿಗಳನ್ನು ಸ್ಮರಿಸಿದರಲ್ಲದೆ ಗ್ರಂಥಗಳು ಮಕ್ಕಳ ಬೌದ್ಧಿಕ ದಿಕ್ಕನ್ನೆ ಬದಲಿಸಬಲ್ಲವು ಎಂದರು. ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಡಾ. ಎಸ್.ವಿ. ಪಾಟೀಲ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಂಕರ ಕುಂಬಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಮನೋಜ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ನರೇಗಲ್ಲ ಅಭಾರ ಮನ್ನಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಂಕಾಪೂರ, ಡಾ. ಎಸ್. ಸವಣೂರ, ಸಿ. ಯು. ಬೆಳ್ಳಕ್ಕಿ, ಸುರೇಶ ಹೊರಕೇರಿ, ಎಸ್. ಎಂ. ರಾಚಯ್ಯನವರ ರಾಮಚಂದ್ರ ಧೋಂಗಡೆ, ಎಂ. ವಾಯ್. ಸಿದ್ನಾಳ ಹಾಗೂ ಸಂಗಮ ಪರಿವಾರದವರು, ಅಭಿಮಾನಿಗಳು, ಶಿಷ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.