ಮಕ್ಕಳ ಏಕತಾನತೆ ಮುಕ್ತಗೊಳಿಸಲು ಪೋಷಕರು ಉತ್ತೇಜಿಸಬೇಕು: ಹಂದ್ಯಾಳು ಪುರುಷೋತ್ತಮ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ,ಡಿ.6- ಕೇವಲ ಓದು, ಬರಹಗಳಲ್ಲಿ ಮುಳುಗಿ ಹೋಗಿ ಏಕತಾನತೆಯಿಂದ ಬಳಲುವ ಮಕ್ಕಳಿಗೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತೇಜಿಸುವ ಮೂಲಕ ಪೋಷಕರು ಮಕ್ಕಳಲ್ಲಿನ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸಬೇಕೆಂದು ಶ್ರೀ ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷರು, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರು ಆಗಿರುವ ಖ್ಯಾತ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳು ಹೇಳಿದರು.
ಇಲ್ಲಿನ ಡಾ.ರಾಜಕುಮಾರ್ ರಸ್ತೆಯ ಬಯಲು ರಂಗಮಂದಿರದ ಹೊಂಗಿರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶ್ರೀ ನಾಟ್ಯ ಲಕ್ಷ್ಮೀ ಕಲಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿನ ಪ್ರತಿಭೆ ಗುರುತಿಸುವುದು ಪೋಷಕರ ಕರ್ತವ್ಯ. ಮಕ್ಕಳಲ್ಲಿ ಹೃದ್ಗತವಾದ ಕಲೆ, ಸಂಸ್ಕೃತಿ, ಗಾಯನ, ನೃತ್ಯ, ಕವಿತ್ವ, ಕ್ರೀಡೆಗಳಲ್ಲಿನ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು. ಕಲಾ ಪ್ರಕಾರದಲ್ಲಿ ನೃತ್ಯವು ಎಲ್ಲ ಕಾಲಕ್ಕೂ ಆಕರ್ಷಕವಾದ ಕಲೆ. ಇಂತಹ ಕಲೆಯನ್ನು ರೂಢಿಗತ ಮಾಡಿಕೊಂಡಿರುವ ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಇದು ಅವರ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿ. ಈ ದಿಸೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೃತ್ಯ ಕಲಾವಿದ ಜಿಲಾನಿ ಬಾಷಾ ಅವರು ಮಕ್ಕಳ ನೃತ್ಯ ಪ್ರಾಕಾರಗಳಿಗೆ ಸಾಣೆ ಹಿಡಿಯುವ ಮೂಲಕ ಸಾವಿರಾರು ಮಕ್ಕಳಿಗೆ ಸ್ಫೂರ್ತಿ ತುಂಬಿದ್ದಾರೆ. ಆದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ನಾಲ್ಕು ಗೋಡೆಯೊಗಳಗೆ ಸೀಮಿತಗೊಳಿಸದೇ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಕೌಶಲ್ಯಗಳನ್ನು ಉದ್ದೀಪನಗೊಳಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ವರ ರಂಗಣ್ಣವರ, ಖ್ಯಾತ ಉದ್ಯಮಿ ಡಾ.ರಮೇಶ್ ಗೋಪಾಲ್ ಮತ್ತಿತರರು ಮಾತನಾಡಿದರು. ಖ್ಯಾತ ನೃತ್ಯಪಟು, ವಿದ್ವಾನ್ ಜಿಲಾನ್ ಬಾಷಾ ಗಾತ್ರ ಮತ್ತು ನಟರಂಗ ನಿದೇಶನ ಮಾಡಿದರೆ ಮೃದಂಗ ಕರ್ನೂಲಿನ ವಿದ್ವಾನ್ ಸುಧಾಕರ್ ಸಾಥ್ ನೀಡಿದರು. 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಮೀರ್ ಮತ್ತು ನೃತ್ಯ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಾಗಭೂಷಣ ಮತ್ತು ಸುರೇಶ್ ಅಲವೇಲು ಇನ್ನಿತರರು ಇದ್ದರು.