ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪಾಲಕರ ಪಾತ್ರವು ಮುಖ್ಯ

ಧಾರವಾಡ, ಮೇ.23: ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಸ್ವಾತಂತ್ರ್ಯವಿರಬೇಕು, ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ತೆಗೆದುಕೊಂಡು ಅಧ್ಯಯನ ಮಾಡಿ ಯಶಗಳಿಸುವಲ್ಲಿ ಪಾಲಕರ ಸಹಕಾರ ಮತ್ತು ಪಾತ್ರವು ಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಛೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಅತ್ಯುತ್ತಮ 10 ವಿದ್ಯಾರ್ಥಿಗಳ ಗೌರವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಓದಿನಲ್ಲಿ, ವಿಷಯದ ಆಯ್ಕೆಯಲ್ಲಿ ಪಾಲಕರು ಒತ್ತಡ ಹಾಕಬಾರದು, ವಿದ್ಯಾರ್ಥಿಗಳ ಆಸಕ್ತಿ, ಆಯ್ಕೆಗೆ ಸ್ವಾತಂತ್ರ್ಯ ನೀಡಬೇಕು. ಇದರಿಂದ ಅವರ ಓದು ಉತ್ತಮವಾಗಿ, ಒಳ್ಳೆಯ ಭವಿಷ್ಯ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಸುಮಾರು 48 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಮಾಡಿವೆ. ಆದರೆ ಜಿಲ್ಲೆಯ ಒಟ್ಟಾರೆ ಸುಧಾರಣೆಗೆ ಶಿಕ್ಷಣ ಇಲಾಖೆ ಈಗಿನಿಂದಲೇ ಕ್ರಮವಹಿಸಬೇಕು. ಮುಂದಿನ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಮೊದಲ ಮೂರು ರ್ಯಾಂಕ್ ಪಡೆಯುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆ ಸ್ಥಾನ ಪಡೆಯಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಪೆÇ್ರೀತ್ಸಾಹಿಸಿದ ಪಾಲಕರನ್ನು, ಶಿಕ್ಷಕರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧಿಕಾರಿ ಬಾರಾಟಕ್ಕೆ ಅವರು ಸ್ವಾಗತಿಸಿದರು. ಎಸ್.ಎಂ.ಹುಡೆದಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ಜಿಲ್ಲೆಗೆ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ

ಹುಬ್ಬಳ್ಳಿ ಕೇಶ್ವಾಪುರದ ಸೆಂಟ್ ಮೈಕಲ್ಸ್ ಪ್ರೌಢ ಶಾಲೆಯ ವಿದ್ಯಾರ್ಥಿ ಬಾಲಾಜಿ ಕೃಷ್ಣ ನಾಯ್ಡು (621) ಮತ್ತು ಧಾರವಾಡ ಮರಾಠಾ ಕಾಲೋನಿಯ ಮಲ್ಲಸಜ್ಜನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಂಜನಾ ಶಿವಲಿಂಗಪ್ಪ ಅಂಗಡಿ (621) ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ಹುಬ್ಬಳ್ಳಿಯ ವಿದ್ಯಾನಗರ ಕೆ.ಎಲ್.ಇ. ಎಂ.ಆರ್.ಸಾಖರೆ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಹನಾ ಪತ್ತಾರ (620) ಮತ್ತು ಧಾರವಾಡದ ವಿದ್ಯಾಗಿರಿ ಜೆ.ಎಸ್.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಸಾಚಿ ಶಶಿಧರ್ ಹೊಂಗಲಮಠ (620) ಹಾಗೂ ಧಾರವಾಡದ ಮಾಳಮಡ್ಡಿಯ ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಆಯುμï ಜೋಗಳೇಕರ್ (620) ಮತ್ತು ಧಾರವಾಡದ ಮಾಳಮಡ್ಡಿಯ ಕೆ.ಇ. ಬೋರ್ಡ್ ಸಂಯುಕ್ತ ಪದವಿ ಪೂರ್ವ ಕಾಲೇಜ್‍ನ ವಿದ್ಯಾರ್ಥಿ ರೋಹನ್ ಚಿವಟೆ (620) ಮತ್ತು ನವನಗರ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸೃಜನಾ ಬಂಗಾರಿಮಠ (620) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹುಬ್ಬಳ್ಳಿ ಆದರ್ಶ ನಗರದ ಡಾ.ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಯಾ ಕಠಾರೆ (619) ಮತ್ತು ಧಾರವಾಡ ವಿಕಾಸ್ ನಗರದ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ವಿನೋದ್ ವಿ. ಹಳಕಟ್ಟಿ (619), ಧಾರವಾಡದ ಪವನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಅಮಾನ್ ಅಫ್ಝಲ್ ಅಹ್ಮದ್ ಖಾನ್ (619) ಹಾಗೂ ಧಾರವಾಡ ಆರ್.ಎನ್. ಶೆಟ್ಟಿ ಕ್ರೀಡಾಂಗಣ ಹತ್ತಿರದ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಪರಶುರಾಮ್ ಶಿಂಗನ್ನವರ್ (619) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.