ಮಕ್ಕಳ ಆರೋಗ್ಯ ನಿಗಾಕ್ಕೆ ಇಬ್ಬರು ಶಿಕ್ಷಕರ ನಿಯೋಜನೆ:ಜಲಾದೆ

ಬೀದರ್:ಡಿ.29: ಜನವರಿಯಿಂದ 6 ರಿಂದ 9ನೇ ತರಗತಿಯ ವಿದ್ಯಾಗಮ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳು ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಜನ ಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಲು ನಿರ್ಧರಿಸಲಾಗಿದೆ ಎಂದು ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.

ನಗರದ ಪ್ರತಾಪನಗರದಲ್ಲಿ ಇರುವ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಪ್ರಾರಂಭ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜನವರಿ 1 ರಿಂದ ಎಸ್ಸೆಸ್ಸೆಲ್ಸಿ ತರಗತಿ ಹಾಗೂ 6 ರಿಂದ 6ನೇ ತರಗತಿಯಿಂದ 9ನೇ ವರೆಗಿನ ವಿದ್ಯಾಗಮ ತರಗತಿಗಳು ಆರಂಭವಾಗಲಿವೆ. ಕೊರೊನಾ ಪ್ರಯುಕ್ತ ಶಾಲೆಯಲ್ಲಿ ಸರ್ಕಾರದ ಎಲ್ಲ 12 ನಿಯಮಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು ಎಂದು ಹೇಳಿದರು.

ಮಾಸ್ಕ್ ಧರಿಸಿಕೊಂಡು ಬಂದವರಿಗೆ ಮಾತ್ರ ಶಾಲೆಯಲ್ಲಿ ಪ್ರವೇಶ ಕಲ್ಪಿಸಲಾಗುವುದು. ಪ್ರವೇಶ ದ್ವಾರದಲ್ಲೇ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡಲಾಗುವುದು. ಪ್ರತಿ ಬೇಂಚ್‍ನಲ್ಲಿ ನಿಗದಿತ ಅಂತರದಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳನ್ನು ಕೂಡಿಸಲಾಗುವುದು. 6 ರಿಂದ 9 ರವರೆಗಿನ ವಿದ್ಯಾಗಮ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಎಸ್ಸೆಸ್ಸೆಲ್ಸಿ ತರಗತಿಗಳನ್ನು ಮಧ್ಯಾಹ್ನ 12.30 ರಿಂದ 3.30 ರ ವರೆಗೆ ನಡೆಸಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಕರ ಅನುಮತಿ ಪತ್ರ ಪಡೆದುಕೊಂಡು ಬರಬೇಕು. ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಶಾಲೆಗೆ ಊಟ, ಉಪಾಹಾರ ತರುವುದನ್ನು ನಿರ್ಬಂಧಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿರಂತರ ನಿಗಾ ಇಡುವುದಕ್ಕಾಗಿಯೇ ಇಬ್ಬರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲೆ ಮುಗಿದ ನಂತರ ನಿತ್ಯ ಶಿಕ್ಷಕರು ಪಾಲಕರನ್ನು ಸಂಪರ್ಕಿಸಿ ಮಕ್ಕಳ ಆರೋಗ್ಯ ಹಾಗೂ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಹೇಳಿದರು.

ಜನ ಸೇವಾ ಪ್ರತಿಷ್ಠಾನದ ನಿರ್ದೇಶಕ ಬಿ.ಎಸ್. ಕುದರೆ, ಶಾಲೆ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿದರು. ಮುಖ್ಯ ಶಿಕ್ಷಕಿ ನೀಲಮ್ಮ ಚಾಮರೆಡ್ಡಿ, ಅನಿತಾ, ರೂಪಾ, ಲಕ್ಷ್ಮಣ ಯರನಳ್ಳಿ, ವಾಮನ ಮಾನೆ, ರಾಹುಲ್, ಶಿವಾನಂದ ಇದ್ದರು.