ಮಕ್ಕಳ ಆರೋಗ್ಯಕ್ಕೆ ಲಸಿಕೆ ಅತಿ ಅವಶ್ಯಕ 

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ.8;  ಮಕ್ಕಳ ಆರೋಗ್ಯಕ್ಕೆ ಲಸಿಕೆ ಅತ್ಯವಶ್ಯವಾಗಿದ್ದು, ನಿರ್ಲಕ್ಷ್ಯ ವಹಿಸದೆ ಕಾಲಕಾಲಕ್ಕೆ ಲಸಿಕೆಗಳನ್ನು ಹಾಕಿಸಬೇಕೆಂದು ಶಾಸಕರಾದ ಚನ್ನಬಸಪ್ಪ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹೊಸಮನೆಯ ದೊಡ್ಡಮ್ಮ ದೇವಸ್ಥಾನ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಲಸಿಕೆಗಳು ಅತಿ ಅವಶ್ಯಕವಾಗಿದೆ. ಸಾರ್ವತ್ರಿಕ ಲಸಿಕೆ ಕುರಿತು ಜಾಗೃತಿ ಮೂಡಿಸಬೇಕು. ಆಶಾ-ಅಂಗನವಾಡಿ ಕಾರ್ಯಕರ್ತೆಯರು ಈ ಕೆಲಸವನ್ನು ಮಾಡುತ್ತಿದ್ದಾರೆ. ಅಂಗನವಾಡಿ ಕೇಂದ್ರವಿದ್ದರೆ ಅಲ್ಲಿ ಆರೋಗ್ಯವಂತ ತಾಯಂದಿರು ಇದ್ದಾರೆಂದು ಅರ್ಥ ಎಂದ ಅವರು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಸರ್ಕಾರ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಅದ್ಭುತವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ತಾಯಿ-ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರೋಗ್ಯ ನೀಡುವುದು ತನ್ನ ಕರ್ತವ್ಯವೆಂದು ತಿಳಿದು ಸರ್ಕಾರ ಗರ್ಭಾವಸ್ಥೆಯಿಂದಲೇ ತಾಯಿ-ಮಗುವಿಗೆ ಪೌಷ್ಟಿಕ ಆಹಾರದಿಂದ ಹಿಡಿದು ಲಸಿಕೆ ನೀಡುವ ತನಕ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ.ಹೆಣ್ಣುಮಕ್ಕಳ ಪ್ರಾತಿನಿಧ್ಯ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಬಳಿ ಪ್ರತಿ ಮಗುವಿನ ವಿವರ ಇರಲಿದೆ. ಇಂತಹ ಕಾರ್ಯಕ್ರಗಳ ಕುರಿತು ಜಾಗೃತಿ ಮೂಡಿಸಬೇಕು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರ ಪಾತ್ರ ಮಹತ್ತರವಾಗಿದ್ದು ಕೋವಿಡ್ ಸಮಯದಲ್ಲಿ ಜೀವದಾತರಾಗಿ ಕೆಲಸ ಮಾಡಿದ್ದಾರೆ. ಈಗಲೂ ಸಹ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಅವರ ಸೇವೆಯನ್ನು ಶ್ಲಾಘಿಸಿದರು.