ಮಕ್ಕಳ ಆರೈಕೆಗೆ ಶಿಶುಪಾಲನಾ ಕೇಂದ್ರ

ಕೋಲಾರ,ಮಾ.೨- ಸರಕಾರಿ ಇಲಾಖೆ ಅಧಿಕಾರಿಗಳ ಮಕ್ಕಳ ಆರೈಕೆಗೆ ರಾಜ್ಯ ಸರಕಾರ ಶಿಶುಪಾಲನಾ ಕೇಂದ್ರವನ್ನು ಪ್ರಾರಂಭಿಸಿದ್ದು, ಇದರ ಸದುಪಯೋಗವನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಡೆದುಕೊಳ್ಳಬೇಕು ಎಂದು ಎಸ್.ಎನ್.ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಹೇಳಿದರು.
ನಗರದ ಎಸ್.ಎನ್.ಆರ್.ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹಾಗೂ ಸರಸ್ವತಿ ಮಹಿಳಾ ಮಂಡಳಿ ಆಶ್ರಯದಲ್ಲಿ ಉದ್ಯೋಗಸ್ಥ ಮಹಿಳೆಯ ಮಕ್ಕಳಿಗಾಗಿ ವಾಸ್ತಲ್ಯ ಶಿಶುಪಾಲನ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಇಲಾಖೆ ಅಧಿಕಾರಿಗಳು ಕೆಲಸದ ಒತ್ತಡದ ಕಾರಣ ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ, ಮಕ್ಕಳನ್ನು ಕರೆತಂದು ಬಿಟ್ಟರೆ ಶಿಶು ಪಾಲನಾ ಸಿಬ್ಬಂದಿ ಮಕ್ಕಳಿಗೆ ಬೇಕಿರುವ ವ್ಯವಸ್ಥೆಯನ್ನು ಶಿಶು ಪಾಲನಾ ಕೇಂದ್ರದಲ್ಲಿ ಮಾಡಲಾಗುತ್ತದೆ ಎಂದರು.
ನಗರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ೨೫ ಮಂದಿ ಮಕ್ಕಳಿಗೆ ಸೌಲಭ್ಯ ಅಗತ್ಯ ಸೌಲಭ್ಯವಿದ್ದು, ಹೆಚ್ಚಿನ ಅನುಕೂಲ ಮಕ್ಕಳಿಗೆ ಆಗಲಿದೆ ಎಂದರಲ್ಲದೆ ಮಕ್ಕಳ ಚಿಕಿತ್ಸೆಗೆ ಮಕ್ಕಳ ವೈದ್ಯರೂ ಸಹ ಕಾರ್ಯನಿರ್ವಹಿಸುತ್ತಾರೆ ಎಂದರು.
ಮಕ್ಕಳ ವೈದ್ಯ ಡಾ.ಬಾಲಚಂದ್ರ ಮಾತನಾಡಿ, ಎಸ್.ಎನ್.ಆರ್ ಆಸ್ಪತ್ರೆಯ ಆವರಣದಲ್ಲಿ ಉತ್ತಮವಾದ ಶಿಶುಪಾಲನ ಕೇಂದ್ರದ ಉಪಯೋಗವಿದೆ ಎಂದರು.
ನಮ್ಮ ತಾಯಿ ಸಹ ಸರ್ಕಾರಿ ಕೆಲಸದಲ್ಲಿದ್ದು, ಮಕ್ಕಳನ್ನು ಆರೈಕೆ ಮಾಡಲು ಯಾರು ಇಲ್ಲದ ಕಾರಣ ನೋಡಿಕೊಳ್ಳಲು ಕಷ್ಟವಾಗಿದ್ದ ಸಮಯದಲ್ಲಿ ಕೆಲಸವನ್ನು ಬಿಡುವ ಮನಸು ಮಾಡಿದ್ದರು ಎಂದರು.
ನಸಿಂಗ್ ಅಧೀಕ್ಷಕಿ ಡಾ.ಎಸ್.ವಿಜಯಮ್ಮ ಮಾತನಾಡಿ, ಪ್ರತಿಯೊಬ್ಬ ಸರ್ಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ಕೇಂದ್ರದ ಸೌಲಭ್ಯಗಳು ಪ್ರತಿ ಜಿಲ್ಲೆಯಲ್ಲಿ ಆಗಬೇಕು, ಈ ನಿಟ್ಟಿನಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪನೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸುಮಾರು ೩೫೦ ಮಹಿಳಾ ನೌಕರರು ಸೇವೆಯಲ್ಲಿದ್ದು, ಅವರ ಮಕ್ಕಳನ್ನು ಶಿಶುಪಾಲನ ಕೇಂದ್ರ ಇಲ್ಲಿ ಬಿಟ್ಟು ನಿಶ್ಚಿಂತೆಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗಿದೆ ಎಂದರು. ಈ ಶಿಶು ಪಾಲನಾ ಕೇಂದ್ರದಲ್ಲಿ ಸುಮಾರು ಆರು ತಿಂಗಳಿಂದ ಹಿಡಿದು ೬ ವರ್ಷದ ಮಕ್ಕಳು ಇದ್ದು, ಕೇಂದ್ರಕ್ಕೆ ಮಕ್ಕಳ ಹಿತ ದೃಷ್ಟಿಯಿಂದ ಅಗತ್ಯ ಸೌಲಭ್ಯವನ್ನು ಒದಗಿಸುವ ಮೂಲಕ ಒಂದು ಉತ್ತಮ ಕಾರ್ಯವಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಶಿವಾರೆಡ್ಡಿ ಎನ್, ನಸಿಂಗ್ ಅಧೀಕ್ಷಕಿ ಸುಮತಿ, ನಸಿಂಗ್ ಅಧಿಕಾರಿ ಜಾಯ್‌ಗೌಡರ್, ನಾಗವೇಣಿ, ರಾಜೇಂದ್ರಕುಮಾರ್ ಇದ್ದರು.