ಮಕ್ಕಳ ಅಭಿವ್ಯಕ್ತಿಗೆ ಶಾಲೆ ವೇದಿಕೆಯಾಗಲಿ

ಧಾರವಾಡ, ನ18: ಚಿತ್ರಕಲೆಯೂ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಲ್ಲಿ ಹುದುಗಿರುವ ರಂಗಕಲೆ, ಭರತನಾಟ್ಯ, ಹಾಡುಗಾರಿಕೆ, ಯೋಗ, ಕ್ರೀಡೆ ಮತ್ತು ಮೇಲಾಟಗಳಂತಹ ಸುಪ್ತವಾದ ಪ್ರತಿಭೆ ಬೆಳೆದು ಬಲಗೊಳ್ಳಲು ಮಕ್ಕಳ ಅಭಿವ್ಯಕ್ತಿಗೆ ಶಾಲೆ ವೇದಿಕೆಯಾಗಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕಿ ಮಮತಾ ನಾಯಕ ಹೇಳಿದರು.
ಅವರು ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ಕಚೇರಿಯು ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿರುವ ಚಿತ್ರಕಲಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಶಾಲಾ ಮಕ್ಕಳಲ್ಲಿಯ ಸುಪ್ತ ಪ್ರತಿಭೆಗಳತ್ತ ಗಮನ ನೀಡಿ ಆ ಪ್ರತಿಭೆಗಳನ್ನು ಗುರುತಿಸಿ ಅವುಗಳು ವಿಕಾಸವಾಗಲು ಸೂಕ್ತ ಮಾರ್ಗದರ್ಶನ ನೀಡಿ ಅಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾವ ದ್ವಂದ್ವಗಳಿಲ್ಲದೇ ಬಹಳ ಮುಕ್ತ ನೆಲೆಯಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಒದಗಿಸಬೇಕು ಎಂದೂ ಮಮತಾ ನಾಯಕ ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಗಜಾನನ ಮನ್ನಿಕೇರಿ ಮಾತನಾಡಿ, ಚಿತ್ರಕಲೆಯು ವಿಶ್ವಭಾಷೆಯಾಗಿದ್ದು, ಸಾವಿರ ಶಬ್ದಕ್ಕಿಂತಲೂ ಹೆಚ್ಚಿನ ಮಾಹಿತಿಯನ್ನು ಒಂದು ನಿರ್ದಿಷ್ಟ ಚಿತ್ರವು ವಿವರಿಸಿತ್ತದೆ. ಗುಹೆಗಳಲ್ಲಿ, ಕಟ್ಟಿಗೆಯ ಫಲಕಗಳಲ್ಲಿ ಹಾಗೂ ಗೋಡೆಗಳ ಮೇಲೆ ರಚನೆಯಾಗಿರುವ ಹಿಂದಿನ ಕಾಲದ ಚಿತ್ರಕಲೆಯನ್ನೇ ಆಧರಿಸಿ, ಒಂದು ಕಾಲಘಟ್ಟದ ನಿರ್ದಿಷ್ಟ ಸಂಸ್ಕøತಿ, ಜನಮನದ ಬದುಕು ಮತ್ತು ಇತಿಹಾಸವನ್ನು ಅರಿಯಲಾಗಿದ್ದು, ಈ ನಿಟ್ಟಿನಲ್ಲಿ ಚಿತ್ರಕಲೆಯು ತನ್ನದೇ ಆದ ವಿಶಿಷ್ಟ ಮಹತ್ವವನ್ನು ಪಡೆದುಕೊಂಡಿದೆ ಎಂದರು.