ಮಕ್ಕಳ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಪರಿಣಾಮಕಾರಿ: ನಾಗರಾಜ್

ಬಳ್ಳಾರಿ, ನ.04: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಹಾಗೂ ಬಳ್ಳಾರಿ ನಗರದ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ದೇವಿನಗರ ವಲಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೂರು ದಿನಗಳ ಕಾಲ ಶಾಲಾ ಪೂರ್ವ ಶಿಕ್ಷಣ ಬಲವರ್ಧನಾ ಕಾರ್ಯಕ್ರಮದ 03ನೇ ಹಂತದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾಗರಾಜ್.ಆರ್ ಅವರು ಸೋಮವಾರ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಅಂಗನವಾಡಿಯ ಮಕ್ಕಳಿಗೆ ದೈಹಿಕ, ಮಾನಸಿಕ, ಬೌದ್ದಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ತರಬೇತಿಯ ಪ್ರಮುಖ ವಿಷಯಗಳಾದ ಸಂಭಾಷಣೆ, ಕಥೆ ಹೇಳುವುದು ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಳ್ಳಾರಿ ನಗರ ಸಿಡಿಪಿಒ ಜಲಾಲಪ್ಪ ಮಾತನಾಡಿ, ಶಾಲಾ ಪೂರ್ವ ಶಿಕ್ಷಣದ 03ನೇ ಹಂತದ ತರಬೇತಿಯನ್ನು ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಪಡೆದುಕೊಂಡು, ತಮ್ಮ ತಮ್ಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳು ಪ್ರಾರಂಭದ ನಂತರ ಮಕ್ಕಳಿಗೆ 3ನೇ ಹಂತದ ತರಬೇತಿ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಸಲು ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಚಾಂದ್‍ಪಾಶಾ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕೆ.ಜಗನ್ನಾಥ. ಕಲಿಕೆ-ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಕೊಟ್ರೇಶ್ ಅವರು ತರಬೇತಿಯ ಪ್ರಮುಖ ವಿಷಯಗಳಾದ ಸಂಭಾಷಣೆ, ಕಥೆ ಹೇಳುವುದು ಮತ್ತು ಕ್ರೀಯಾತ್ಮಕ ಚಟುವಟಿಕೆಗಳು ಮಕ್ಕಳ ಬೆಳವಣಿಗೆಯಲ್ಲಿ ಪ್ರಾಮುುಖ್ಯತೆ ಕುರಿತಂತೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ತರಬೇತುದಾರರಾದ ಕಾತ್ಯಾಯನಿ ನಿರೂಪಿಸಿದರು. ಮೇಲ್ವಿಚಾರಕಿ ಮಂಜುಳಾ ವಂದಿಸಿದರು.