ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಎಲ್ಲರ ಸಹಭಾಗಿತ್ವ ಅಗತ್ಯ: ಶಶಿಧರ ಕೋಸಂಬೆ

ವಿಜಯಪುರ:ಮೇ.26: ಜಿಲ್ಲೆಯು ಮಕ್ಕಳ ಅಪೌಷ್ಟಿಕತೆ ಮುಕ್ತ ಜಿಲ್ಲೆ ಮಾಡುವ ಯೋಜನೆ ಹಾಕಿಕೊಂಡಿದ್ದು, ಎಲ್ಲರ ಸಹಭಾಗಿತ್ವ ಅಗತ್ಯ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಹೇಳಿದರು.
ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಮಕ್ಕಳ ಪೌಷ್ಟಿಕತೆ ಪುನಃಶ್ಚೇತನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿನ ಯಾವುದೇ ಮಗು ಸಹ ಅಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಹಲವಾರು ವರ್ಷಗಳಿಂದ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಪ್ರಯತ್ನ ಮಾಡಿದರು ಸಹ ಇನ್ನು ಅಪೌಷ್ಟಿಕತೆಯಿಂದ ಮುಕ್ತ ಆಗದೇ ಇರುವುದು ನೋವಿನ ಸಂಗತಿ ಎಂದರೆ ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಪುನಃಶ್ಚೇತನ ಘಟಕವು ಉತ್ತಮವಾದ ಪರಿಸರದಲ್ಲಿ ಇರಬೇಕು ಎಂದು ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ತಿಳಿಸಿದ ಅವರು ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಬಗ್ಗೆ ಮೇನು ಚಾರ್ಟ್ ಅಳವಡಿಸದೇ ಇರುವುದನ್ನು ಕಂಡು ತರಾಟೆ ತೆಗೆದುಕೊಂಡರು.
ದಾಖಲಾದ ಎಲ್ಲಾ ಮಕ್ಕಳಿಗೆ ಸಕಾಲಕ್ಕೆ ಪೌಷ್ಟಿಕ ಆಹಾರವನ್ನು ನೀಡಬೇಕು ಮತ್ತು ಜೊತೆಯಲ್ಲಿ ಬಂದವರಿಗೆ ದಿನಗೂಲಿ ಭತ್ಯೆ ನೀಡಬೇಕು ಎಂದು ಹೇಳಿದರು.
ನಂತರ ಆಸ್ಪತ್ರೆಯ ಮಕ್ಕಳ ತುರ್ತು ಚಿಕಿತ್ಸಾ ಘಟಕ ಸೇರಿದಂತೆ ವಿವಿಧ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು ಜತೆಗೆ ಮಕ್ಕಳ ಆರೋಗ್ಯದ ಬಗ್ಗೆ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಕೆ.ಕೆ. ಚೌವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಾವಿತ್ರಿ ಗುಗ್ಗರಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.