ಮಕ್ಕಳೋತ್ಸವ ಕಾರ್ಯಕ್ರಮ


ಲಕ್ಷ್ಮೇಶ್ವರ,ನ.15: ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ಘಟಕಗಳ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಶಾಲೆಗೊಂದು ಕಾರ್ಯಕ್ರಮದಲ್ಲಿ ಮಕ್ಕಳೋತ್ಸವ ನಡೆಯಿತು.
ಬಿಇಒ ಜಿ.ಎಂ. ಮುಂದಿನಮನಿ ಹಾಗೂ ಶಾಲೆ ವಿದ್ಯಾರ್ಥಿ ಯಶವಂತ ಲಕ್ಷ್ಮಣ ಬಾಕಳೆ ನೆಹರೂಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಂದ್ರ ಗಡಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ರಾಜ್ಯದ ಪ್ರತಿ ಶಾಲೆಯಲ್ಲೂ ಮಕ್ಕಳ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಆರಂಭಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ಘಟಕಗಳನ್ನು ಆರಂಭಿಸಲಾಗುವುದು. ಈಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ಕಡಿಮೆ ಆಗುತ್ತಿದೆ. ಹೀಗಾಗಿ ಮಕ್ಕಳು ಓದಿನಿಂದ ದೂರ ಸರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರು ಚಿಂತನೆ ಮಾಡಬೇಕು’ ಎಂದರು.
ಮಕ್ಕಳ ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ ಮಾತನಾಡಿ ‘ಐಸ್ ಕರಗಿದಂತೆ ರಾಜ್ಯದಲ್ಲಿ ಕನ್ನಡ ಶಾಲೆಗಳು ಕರಗುತ್ತಿರುವುದು ವಿಷಾದನೀಯ. ಖಾಸಗಿ ಶಾಲೆಗಳ ಭರಾಟೆಯಲ್ಲಿ ಕನ್ನಡ ಶಾಲೆಗಳು ನೇಪತ್ಯಕ್ಕೆ ಸರಿಯುತ್ತಿರುವುದು ದುಃಖದ ಸಂಗತಿ. ಕಾರಣ ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು’ ಎಂದರು.
ಶಾಲಾ ಪ್ರಧಾನಮಂತ್ರಿ ಅಶ್ವಿನಿ ಯಲ್ಲಪ್ಪ ಜಬಡಿ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷೆ ನಿರ್ಮಲಾ ಬಸವರಾಜ ನರೇಗಲ್ಲ, ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪುರ, ಸಿಆರ್‍ಪಿ ಉಮೇಶ ನೇಕಾರ, ಮುಖ್ಯ ಶಿಕ್ಷಕಿ ಎಲ್.ಎ. ನಡುವಿನಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ಎಸ್. ಈಳಿಗೇರ, ನಾಗಪ್ಪ ಸಾತಪುತೆ ಗೊರವರ, ಡಿ.ಎಂ. ಪೂಜಾರ, ಹೊತ್ತಗಿಮಠ, ಶಾಲಾ ಶಿಕ್ಷಕ, ಶಿಕ್ಷಕಿಯರು ಇದ್ದರು. ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹಣಗಿ ಸ್ವಾಗತಿಸಿದರು. ಶಿಕ್ಷಕ ಎನ್.ಎಸ್. ಬಂಕಾಪುರ ನಿರೂಪಿಸಿ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.