ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲಿ:ಶಾಸಕ ಎಂ.ವೈ ಪಾಟೀಲ್

ಕಲಬುರಗಿ,ಫೆ.26:ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿಯೊಂದಿಗೆ ಸಾಧನೆ ಮಾಡಬೇಕು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಕ್ಕಳಿಗೆ ಸಲಹೆ ನೀಡಿದರು.

ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರಗಿ ವಿವಿಯ ಬಯಲು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ ಮಕ್ಕಳ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಇದು ಕೇವಲ ಉತ್ಸವ ಅಲ್ಲ, ನಮ್ಮ ಭಾಗದ ದೊಡ್ಡ ಹಬ್ಬವಾಗಿದೆ. ಭಾರತ ಸ್ವಾತಂತ್ರ್ಯ ಮತ್ತು ನಿಜಾಮ ಶಾಹಿಯಿಂದ ಮುಕ್ತಿ ಪಡೆದ ಬಳಿಕ ಸ್ವಾತಂತ್ರೋತ್ಸವವನ್ನು ಮಾರ್ಪಾಟಾಗಿ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಈ ಭಾಗದ ಎಲ್ಲರು ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.

ಉತ್ಸವದಲ್ಲಿ ರಾಜಕಾರಣ ಬೇಡ. ಏಳು ಜಿಲ್ಲೆಯನ್ನು ಒಳಗೊಂಡು ಈ ಉತ್ಸವ ಆಚರಿಸಲಾಗುತ್ತಿದೆ. ಆದರೆ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟನೆ ಸಮಾರಂಭದಲ್ಲಿ ಈ ಭಾಗದ ಜನಪ್ರತಿನಿಧಿಗಳ ಗೈರು ಹಾಜರಿ ಕಾಣುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ ಅವರು, ಈಗಾಗಲೇ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ದೊಡ್ಡ ಮಟ್ಟದ ಉತ್ಸವಕ್ಕೆ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲು ಕೇಳಿಕೊಳ್ಳಲಾಯಿತು. ಆದರೆ ಅವರು ಭಾಗವಹಿಸದೆ ಇರುವುದು ನೋವು ತಂದಿದೆ ಎಂದರು.

ಮಕ್ಕಳು ಏನಾದರೂ ಆಗಿ ಆದರೆ ರಾಜಕಾರಣಿ ಮಾತ್ರ ಆಗಬೇಡಿ ಎಂದು ಸಲಹೆ ನೀಡಿದ ಅವರು, ಗುರಿ ಸಾಧಿಸಿ ಉನ್ನತ ಮಟ್ಟದ ಅಧಿಕಾರಿಗಳಾಗಿ ಹೊರಹೊಮ್ಮಿ ಎಂದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಿದೆ. ಇಲ್ಲಿನ ಇತಿಹಾಸ ಎಲ್ಲರೂ ತಿಳಿದುಕೊಳ್ಳಬೇಕು. ಮಕ್ಕಳು ಸ್ಪರ್ಧಾತ್ಮಕ ಗುಣ ಬೆಳೆಸಿಕೊಂಡು ದೊಡ್ಡ ಕಲಾವಿದರಾಗಿ ಹೊರಹೊಮ್ಮಬೇಕು. ಈ ಭಾಗದ ಖ್ಯಾತ ಚಿತ್ರ ಕಲಾವಿದರಾದ ಎಸ್.ಎಂ.ಪಂಡಿತ, ನಾಡೋಜ ಖಂಡೇರಾವ್, ವಿ.ಜಿ.ಅಂದಾನಿ, ಎ.ಎಸ್.ಪಾಟೀಲ್ ಅವರ ಸಾಧನೆ ತಿಳಿದುಕೊಂದು ನೀವು ದೊಡ್ಡ ಕಲಾವಿದರಾಗಬೇಕು ಎಂದು ಕರೆ ನೀಡಿದರು.

ರಾಜ್ಯ ಸರ್ಕಾರ ಶೀಘ್ರದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ಪಟ್ಟಿ ಬಿಡುಗಡೆ ಮಾಡಲಿದ್ದು, ಅದರಲ್ಲಿ ನಮ್ಮ ಭಾಗದಿಂದ 5 ಸಾವಿರ ಶಿಕ್ಷಕರು ನೇಮಕವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕನಸು ನನಸಾಗಿಸಲು ಶ್ರಮಿಸಿ

ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ನಮ್ಮ ಭಾಗದ ಜಿಲ್ಲೆಗಳಲ್ಲಿರುವ ಮಕ್ಕಳ ಪ್ರತಿಭೆಗಳಿಗೆ ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಕ್ಕಳ ಉತ್ಸವ ಆಚರಿಸುತ್ತಿದ್ದೇವೆ. ಕಲಾಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ಇದಾಗಿದೆ. ಚಿತ್ರಕಲೆಯೊಂದಿಗೆ ಓದಿಗೆ ಒತ್ತು ನೀಡಿ ನಿಮ್ಮ ಕನಸು ನನಸಾಗಿಸಲು ಮುಂದೆ ಬರಬೇಕು. ತಾರೆ ಜಮೀನ್ ಪರ್ ಚಲನಚಿತ್ರವನ್ನು ಉದಾಹರಿಸಿ ಮಕ್ಕಳಿಗೆ ಹುರಿದುಂಬಿಸಿದರು.

ಕೆಕೆಆರ್ ಡಿಬಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸುಮಾರು 500 ಕೋಟಿ ಮೀಸಲಿಟ್ಟಿದೆ. ನೂತನ ಶಾಲಾ ಕೋಣೆಗಳು ಸೇರಿ ಶಾಲೆಗಳ ಬಲವರ್ಧನೆಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದರು.

ಸಮಾರಂಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಗರಿಮಾ ಪನ್ವಾರ್, ಡಿ.ಡಿ.ಪಿ.ಐ ಶಂಕರಗೌಡ ಬಿರಾದಾರ, ಬಿ.ಇ.ಓ. ಗಳಾದ ವೀರಣ್ಣ ಬೊಮ್ಮನಹಳ್ಳಿ, ಶಂಕರಮ್ಮ ಡವಳಿ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಕೊಪ್ಪದ, ರಿಜಿಸ್ಟಾರ್ ಶರಣಪ್ಪ ಸತ್ಯಂಪೇಟೆ, ಚಂದ್ರಹಾಸ, ರಾಜೇಶ ಇತರರಿದ್ದರು.

ಗಮನ ಸೆಳೆದ ಮಕ್ಕಳ ಮೋಜಿನ ಆಟ

ಬಯಲು ರಂಗ ಮಂದಿರದಲ್ಲಿ ನಡೆದ ಮಕ್ಕಳ ಉತ್ಸವದಲ್ಲಿ ವಿಶೇಷವಾಗಿ ಮಕ್ಕಳ ಮೋಜಿನ ಆಟ ಗಮನ ಸೆಳೆಯಿತು.
ಬಲೂನ್ ಒಡೆಯುವುದು, ಬಲೂನ್ ಸಹಾಯದಿಂದ ಗ್ಲಾಸ್ ಶಿಫ್ಟ್ ಮಾಡುವುದು, ಅದೃಷ್ಟದ ರಿಂಗ್ ಆಡುವುದು, ಥರ್ಮಾಕೋಕ್ ಬಾಲ್ ಸಂಗ್ರಹ, ಜಂಪಿಂಗ್ ಬಾಲ್ ಆಡುವುದು, ಬಕೆಟ್ ಗೋಲ್, ಟಿಕಳಿ ಮತ್ತು ಬಾಲ ಹಚ್ಚುವುದು, ನಿಂಬೆ ಹಣ್ಣಿನ ಆಟ, ಪಾಸಿಂಗ್ ಬಾಲ್, ಬ್ಯಾಲೆಂಸಿಂಗ್ ಬಾಲ್ ಆಟ ಆಡುವ ಮೂಲಕ ಸಂಭ್ರಮಿಸಿದರು. ಗೆದ್ದ ಮಕ್ಕಳಿಗೆ ಸ್ಥಳದಲ್ಲಿಯೇ ಚಾಕಲೇಟ್ ಮತ್ತು ಬಿಸ್ಕೆಟ್ ನೀಡಿ ಆಟಕ್ಕೆ ಆಯೋಜಕರು ಹುರಿದುಂಬಿಸಿದರು.

ಇನ್ನೊಂದೆಡೆ ಕಲ್ಯಾಣ ಕರ್ನಾಟಕ ಭಾಗದ ಸುಮಾರು 1,500ಕ್ಕು ಹೆಚ್ಚು ಮಕ್ಕಳ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದರು. 6ನೇ ತರಗತಿಯಿಂದ 8ನೇ ತರಗತಿ ಮಕ್ಕಳಿಗೆ ಕಲ್ಯಾಣ ಕರ್ನಾಟಕ ಐತಿಹಾಸಿಕ ಸ್ಥಳಗಳು, 9 ರಿಂದ 12ನೇಯವರಿಗೆ ಕಲ್ಯಾಣ ಕರ್ನಾಟಕದ ಸಾಂಸ್ಕøತಿಕ ವೈಭವ ಮತ್ತು ಸ್ನಾತಕ ಮತ್ತು ಸ್ನಾತಕ್ಕೋತ್ತರ ಪದವಿದವರಿಗೆ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಚಳವಳಿ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರಥಮ ಬಹುಮಾನಕ್ಕೆ 10 ಸಾವಿರ, ದ್ವಿತೀಯ ಬಹುಮಾನಕ್ಕೆ 8,500 ರೂ. ಮತ್ತು ತೃತೀಯ ಬಹುಮಾನಕ್ಕೆ 7,000 ಸಾವಿರ ರೂ. ಹಾಗೂ 7 ಸಮಾಧಾನಕರ ಬಹುಮಾನವೆಂದು ತಲಾ 3 ಸಾವಿರ ರೂ. ನಿಗದಿಪಡಿಸಲಾಗಿದೆ. ಪ್ರತಿ ವಿಭಾಗದ ಸ್ಪರ್ಧೆಯ ನಿರ್ಣಾಯಕರಾಗಿ 9 ಜನ ಶಿಕ್ಷಕರು ಕಾರ್ಯನಿರ್ವಹಿಸಿದರು.