ಮಕ್ಕಳು ಶಾಲೆಯಲ್ಲಿರಲಿ : ಮಹಾಂತೇಶ್ ಬೀಳಗಿ

ದಾವಣಗೆರೆ,ಮಾ.31;:ಮಕ್ಕಳ ಬಾಲ್ಯ ಅಮೂಲ್ಯವಾಗಿದ್ದು, ಅವರು ಶಾಲೆಯಲ್ಲಿ ಕಲಿಯುತ್ತಿರಬೇಕು. ಮಕ್ಕಳನ್ನು ಕೆಲಸಕ್ಕಾಗಿ ಬಳಸಿಕೊಂಡಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮಹಾಂತೇಶ್ ಬೀಳಗಿ ಕೈಗಾರಿಕೆಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಬಾಲ ಕಾರ್ಮಿಕ ಸಂಸ್ಥೆಯ ಕಾರ್ಯಕಾರಿಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಾಲ ಕಾರ್ಮಿಕರನ್ನು ಕೆಲಸದಿಂದ ವಿಮುಕ್ತಿಗೊಳಿಸಲು ಕಲಂ 17ರಡಿ ನೇಮಕಗೊಂಡ ನಿರೀಕ್ಷಕರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರು ಕೆಲಸ ನಿರ್ವಹಿಸುವ ಕ್ಷೇತ್ರಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವುದರೊಂದಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಮಕ್ಕಳು ಈಗಲೂ ಮಂಡಕ್ಕಿ ಭಟ್ಟಿ ಹಾಗೂ ಅವಲಕ್ಕಿ ಭಟ್ಟಿಗಳಲ್ಲಿ ಕೆಲಸ ಮಾಡುತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಮಂಡಕ್ಕಿ ಮತ್ತು ಅವಲಕ್ಕಿ ಭಟ್ಟಿಗಳಿಗೆ ಅನಿರೀಕ್ಷಿತ ದಾಳಿ ನಡೆಸಿ ಅಲ್ಲಿ ಕೆಲಸ ಮಾಡುವ ಮಕ್ಕಳನ್ನು ರಕ್ಷಿಸುವ ಭರವಸೆ ನೀಡಿದ ಅವರು ಕಾರ್ಮಿಕ ಇಲಾಖೆ ನಿರೀಕ್ಷಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೂ ಏ.30 ರ ಒಳಗೆ ಬಾಲಕಾರ್ಮಿಕರು ಮತ್ತು ಭಿಕ್ಷÄಕ ಮಹಿಳೆ ಮತ್ತು ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಗಡುವು ನೀಡುತ್ತೇನೆ ಎಂದರು.ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಕಾರ್ಮಿಕ ನಿರೀಕ್ಷಕರ ತಾಲ್ಲೂಕು ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಬಾಲಕಾರ್ಮಿಕರ ಯೋಜನಾ ಸೊಸೈಟಿ ಬ್ಯಾಂಕ್‌ನ 4 ಖಾತೆಗಳಲ್ಲಿ ಎನ್.ಸಿ.ಎಲ್.ಪಿ ಖಾತೆಯನ್ನು ಸ್ಥಗಿತಗೊಳಿಸಿ ಉಳಿದ ಮೂರು ಖಾತೆಗಳನ್ನು ನಿರ್ವಹಿಸಲು ನಿರ್ದೇಶಿಸಿದರು. ಮಂಡಕ್ಕಿ ಮತ್ತು ಅವಲಕ್ಕಿ ಭಟ್ಟಿಗಳಿಗೆ ಕೋವಿಡ್-19 ತಪಾಸಣೆಗಾಗಿ 2 ತಂಡಗಳನ್ನು ಒಂದು ವಾರದ ಮಟ್ಟಿಗೆ ಕಳುಸಿಕೊಡುತ್ತೇವೆ ಅಲ್ಲಿ ಕೆಲಸ ಮಾಡುವ ಎಲ್ಲರೂ ತಪಾಸಣೆ ಮಾಡಿಕೊಳ್ಳಿ ಎಂದು ಮಂಡಕ್ಕಿ ಭಟ್ಟಿ ಕ್ಷೇಮಾಭಿವೃದ್ಧಿ ಸಂಘದ ಆಧ್ಯಕ್ಷ ಮತ್ತು ಸದಸ್ಯರಿಗೆ ಸೂಚಿಸಿದರು. ಹಾಗೂ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟವರು ಅಜಾದ್ ನಗರದಲ್ಲಿರುವ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ವ್ಯಾಕ್ಸಿನೇಷನ್ ಪಡೆದುಕೊಳ್ಳಬೇಕು. ಸಭೆಯಲ್ಲಿ ಎಎಸ್‌ಪಿ ರಾಜೀವ್,ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೌಸರ್ ರೇಷ್ಮಾ, ದಾವಣಗೆರೆ ಮಂಡಕ್ಕಿ ಭಟ್ಟಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ ಮಹಮದ್ ಹರ್ಷದ್, ಇತರೆ ಪದಾಧಿಕಾರಿಗಳು ಹಾಜರಿದ್ದರು.