ಮಕ್ಕಳು ಶಾಲೆಗೆ ಹೋಗಿ ಒಳ್ಳೆಯ ಹೆಸರು ಮಾಡಬೇಕು: ನ್ಯಾಯಾಧೀಶ ತ್ಯಾಗರಾಜ್

ರಾಯಚೂರು.ಜು.೨೯- ಮಕ್ಕಳು ಎಲ್ಲೇ ಇರಲಿ ತಮ್ಮ ಹಕ್ಕುಗಳನ್ನು ಪಡೆಯಲು ಅವಕಾಶ ನಿರ್ಮಿಸಬೇಕು. ಅಲ್ಲದೆ ಪ್ರತಿಯೊಂದು ಮಗುವು ಶಿಕ್ಷಣದಿಂದ ವಂಚಿತರಾಗದೇ ಶಾಲೆಗೆ ಹೋಗಿ ಆ ಶಾಲೆಗೆ ಒಳ್ಳೆಯ ಹೆಸರು ಮಾಡಬೇಕೆಂದು ಇಲ್ಲಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ತ್ಯಾಗರಾಜ್ ಎನ್.ಇನವಳ್ಳಿ ಅವರು ಹೇಳಿದರು.
ಅವರು ಜು.೨೮ರ ಗುರುವಾರ ದಂದು ನಗರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಇವರ ಸಹಯೋಗದಲ್ಲಿ ಮಕ್ಕಳ ಹಕ್ಕುಗಳು, ಬಾಲನ್ಯಾಯ ಕಾಯ್ದೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ಚಾಲನೆ ನೀಡಿ, ಮಾತನಾಡಿದರು.
ಸಂಸ್ಥೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯದ ಜೊತೆಗೆ ಮಕ್ಕಳ ಹಕ್ಕುಗಳ ಉಲಂಘನೆ ಆಗದಂತೆ ಹಾಗೂ ಸಂವಿಧಾನದ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕತ್ಯರ್ವಗಳನ್ನು ಕೂಡ ಮಕ್ಕಳಿಗೆ ತಿಳಿಸಬೇಕೆಂದು ಶಾಲೆಯ ಮುಖ್ಯಗುರುಗಳಿಗೆ ತಿಳಿಸಿದರು.
ಈ ವೇಳೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯನಂದ ಎಂ. ಬೇಲೂರೆ, ಅವರು ಮಾತನಾಡಿ, ಮಕ್ಕಳಿಗೆ ಯಾವುದೇ ಕಾನೂನು ಸೇವೆಗಳು ಬೇಕಾದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿದ್ದಲ್ಲಿ ಉಚಿತವಾಗಿ ಕಾನೂನು ಸಲಹೆ ಮತ್ತು ಸೇವೆಗಳನ್ನು ಒದಗಿಸಲಾಗುವುದೆಂದು ಹೇಳಿದರು.
ಈ ವೇಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಅಹ್ಮದ್ ಜಿ. ಅವರು ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸಿಗುವಂತಹ ಸೌಲಭ್ಯಗಳಾದ ವಿಶೇಷ ಪಾಲನೆ ಯೋಜನೆ, ಪ್ರಾಯೋಜಕತ್ವ ಯೋಜನೆ, ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಜಿಲ್ಲೆಯಲ್ಲಿ ಅನಾಥ, ಪರಿತ್ಯಕ್ತ, ನವಜಾತ, ಒಪ್ಪಿಸಲ್ಪಟ್ಟ ಮಕ್ಕಳು, ಪೊಷಣೆ ಮತ್ತು ರಕ್ಷಣೆಗೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮೂಲಕ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ, ರಕ್ಷಣೆ ಮತ್ತು ಪುನರ್‌ವಸತಿ ಒದಗಿಸಲಾಗುತ್ತಿದೆ ಎಂದು ಮಕ್ಕಳಿಗೆ ಎಂದರು.
ಈ ವೇಳೆ ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕರಾದ ಸುದರ್ಶನ್ ಅವರು ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲನ್ಯಾಯ ಕಾಯ್ದೆ, ಪೊಕ್ಸೋ ಕಾಯ್ದೆ, ಬಾಲಕಾರ್ಮಿಕ ನಿಷೇಧ, ಬಾಲ್ಯವಿವಾಹ ನಿಷೇಧ, ಮಕ್ಕಳ ಭಿಕ್ಷಾಟನೆ ನಿರ್ಮೂಲನೆ ಹಾಗೂ ಮಕ್ಕಳ ಇನ್ನಿತರ ಎಲ್ಲಾ ಸಮಸ್ಯಗಳಿಗೆ ಉಚಿತ ಮಕ್ಕಳ ಸಹಾಯವಾಣಿ ೧೦೯೮ಗೆ ಸಂಪರ್ಕಿಸುವಂತೆ ಕೋರಿದರು.
ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರುಕ್ಮಿಣಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯರು ಅರ್ಚನಾ ನಾಯಕ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಇದ್ದರು.