ಮಕ್ಕಳು, ಮಹಿಳೆಯರು, ಗರ್ಭಿಣಿಯರಿಗೆ ಸೂಕ್ತ ಪೌಷ್ಠಿಕ ಆಹಾರ ಅಗತ್ಯ

ಮರಿಯಮ್ಮನಹಳ್ಳಿ, ಮಾ.24: ಮಕ್ಕಳು, ಮಹಿಳೆಯರು, ಗರ್ಭಿಣಿಯರು ಸಕಾಲಕ್ಕೆ ಸೂಕ್ತ ಪೌಷ್ಠಿಕ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಿ ಬಾಳಿ ಎಂದು ಗ್ರಾಮ ಲೆಕ್ಕಾಧಿಕಾರಿ ಬಸವರಾಜಯ್ಯ ಸಾಲಿಮಠ ಅಭಿಪ್ರಾಯ ಪಟ್ಟರು.
ಅವರು ಸಮೀಪದ ಜಿ.ನಾಗಲಾಪುರ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆವತಿಯಿಂದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಾಕ್ವಾಡ್ ಕಾರ್ಯಕ್ರಮದ ನಿಮಿತ್ತ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಮಕ್ಕಳೇ ದೇಶದ ಭವಿಷ್ಯದ ನಾಯಕರುಗಳು. ಅಂತಹ ಮಕ್ಕಳಿಗೆ ಜನ್ಮ ನೀಡುವ ಗುರುತರ ಜವಾಬ್ದಾರಿ ಹೆಣ್ಣುಮಕ್ಕಳದು. ಹಾಗಾಗಿ ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಸೂಕ್ತ ಪೌಷ್ಠಿಕ ಆಹಾರ ಸೇವನೆ ಮಾಡಬೇಕು. ಇಲಾಖೆಯವತಿಯಿಂದ ಕೊಡಮಾಡುವ ಪೌಷ್ಠಿಕ ಆಹಾರದ ಜೊತೆ ಜೊತೆಗೆ ತಮ್ಮ ತಮ್ಮ ಮನೆಗಳಲ್ಲಿ ಪೂರಕ ವಾತಾವರಣದೊಂದಿಗೆ ಆಹಾರ ಸೇವೆ ಮಾಡಬೇಕು. ಇವರುಗಳನ್ನು ಕುಟುಂಬದವರು ಪೂರಕ ವಾತಾವರಣದೊಂದಿಗೆ ಪ್ರೀತಿ ಆರೈಕೆ ಮಾಡಬೇಕು ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಜಾಥಾದ ಮೂಲಕ ಓಣಿ ಓಣಿಗಳಲ್ಲಿ ಸಂಚರಿಸಿ ರಕ್ತಹೀನತೆ, ಅಪೌಷ್ಠಿಕತೆ ಕುರಿತು ಜನರಿಗೆ ಅರಿವು ಮೂಡಿಸಿದರು. ಅಲ್ಲದೇ ಗರ್ಭಿಣಿಯರು, ಮಕ್ಕಳು, ಮಹಿಳೆಯರು, ಬಾಣಂತಿಯರು ಸೂಕ್ತ ಪೌಷ್ಠಿಕ ಆಹಾರಗಳನ್ನು ಸೇವಿಸಬೇಕು ಎನ್ನುವುದರ ಕುರಿತಾಗಿ ಜಾಗೃತಿ ಮೂಡಿಸಿದರು. ಗ್ರಾಮದ ಹಿರಿಯರಾದ ಜಿ.ರೇವಣಸಿದ್ದಪ್ಪ ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಹೆಚ್.ಕೆ.ನಾಗರತ್ನಮ್ಮ, ಎಸ್.ವಿದ್ಯಾರಾಣಿ, ಸಹಾಯಕಿಯರಾದ ಎಸ್.ಗಂಗಮ್ಮ, ಹೊನ್ನೂರಮ್ಮ, ದುರುಗಮ್ಮ ಮುಖಂಡರಾದ ಕೋರಿ ರುದ್ರಪ್ಪ, ರಾಮಪ್ಪ, ಸೋಮಣ್ಣ ಹಾಗೂ ಇತರರು ಇದ್ದರು.