ಮಕ್ಕಳು ಭವಿಷ್ಯದ ವಿಜ್ಞಾನಿಗಳು: ಗಂಗಣ್ಣ ಸ್ವಾಮಿ

ಬೀದರ.ಮಾ.19: ಮಕ್ಕಳು ಭವಿಷ್ಯದ ವಿಜ್ಞಾನಿಗಳು, ಅವರಲ್ಲಿ ವೈಜ್ಞಾನಿಕ ಚಿಂತನೆ, ಕ್ರಿಯಾಶೀಲತೆ, ಸೃಜನ ಶೀಲತೆಯ ಮನೋಭಾವ ಬೆಳೆಸುವ ಅಗತ್ಯವಿದೆ. ಮಕ್ಕಳಲ್ಲಿ ಓದುವ ಹವ್ಯಾಸ, ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ, ಶಿಸ್ತು ಹಾಗೂ ಸಮಯ ಪಾಲನೆಯ ಬಗ್ಗೆ ಅರಿವು ಮೂಡಿಸಿದರೆ ಅವರು ಶೈಕ್ಷಣಿಕವಾಗಿ ಯಶಸ್ವಿಯಾಗಿ ಅವರಲ್ಲಿರುವ ಪ್ರತಿಭೆ ಅರಳಲಿಕ್ಕೆ ನೆರವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಣ್ಣಾ ಸ್ವಾಮಿ ನುಡಿದರು.

ಸರಕಾರಿ ಪ್ರೌಢ ಶಾಲೆ ಬುಧೇರಾದಲ್ಲಿ ವಿಜ್ಞಾನ ಪ್ರಯೋಗಾಲಯ, ಚಿತ್ರಕಲಾ ವಸ್ತು ಪ್ರದರ್ಶನ ಹಾಗೂ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಡಾ. ಟಿ.ಆರ್. ದೊಡ್ಡೆ ಮಾತನಾಡಿ, ವಿಜ್ಞಾನ ಪ್ರಯೋಗಾಲಯದಲ್ಲಿರುವ ಉಪಕರಣಗಳನ್ನು ಬಳಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ಆಸಕ್ತಿ ಹೆಚ್ಚಾಗಿ ಕಲಿಕೆಗೆ ಪ್ರೇರಣೆಯಾಗುವುದರ ಜೊತೆಗೆ ಓದುವ ಹವ್ಯಾಸ ಬೆಳೆಯುತ್ತದೆ ಎಂದರು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್ ಮಾತನಾಡಿ, ಮಕ್ಕಳು ಪ್ರಶ್ನೆ ಕೇಳುವ ಗುಣ ಬೆಳೆಸಿಕೊಳ್ಳಬೇಕು, ಏನು, ಏಕೆ, ಹೇಗೆ ಎಂದು ಶಿಕ್ಷಕರಲ್ಲಿ ಪ್ರತಿ ವಿಷಯದ ಬಗ್ಗೆ ಕುತೂಹಲದಿಂದ ದಿನಾಲು ಪ್ರಶ್ನಿಸಬೇಕು. ಮತ್ತು ಶಿಕ್ಷಕರು ಬೋಧನೆಯಲ್ಲಿ ಹೊಸ ಹೊಸ ವೈಜ್ಞಾನಿಕ ಕೌಶಲ್ಯಗಳನ್ನು ಅಳವಡಿಸಿಕೊಂಡು, ಮಕ್ಕಳಲ್ಲಿ ವೈಜ್ಞಾನಿಕ ಮಹತ್ವದ ಪರಿಕಲ್ಪನೆಯನ್ನು ಮೂಡಿಸಬೇಕೆಂದು ನುಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿಯ ಅಪರ ಆಯುಕ್ತರ ಕಾರ್ಯಾಲಯದ ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವೆಂದ್ರಪ್ಪ ಮಾತನಾಡಿ, ಇಲಾಖೆಯು ಮಕ್ಕಳಿಗೆ ಸುಸಜ್ಜಿತವಾದ ಕಟ್ಟಡ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಿದೆ. ಮಕ್ಕಳು ಇದನ್ನು ಸದುಪಯೋಗಿಸಿಕೊಂಡು ಮನಸಾಪೂರ್ವಕ ಶೃದ್ಧೆಯಿಂದ ಓದಿನ ಕಡೆ ಗಮನಹರಿಸಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ, ಕರ್ನಾಟಕ ರಾಜ್ಯ ಚಿತ್ರಕಲಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಷ್ಣುಕಾಂತ ಠಾಕೂರ, ರಾಷ್ಟ್ರಿಯ ವಿಜ್ಞಾನ ಸಮಾವೇಶದ ಜಿಲ್ಲಾ ಶೈಕ್ಷಣಿಕ ಸಂಯೋಜಕ ಸಂಜೀವಕುಮಾರ ಸ್ವಾಮಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಮಾರುತಿ ಲದ್ದೆ ಮಾತನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಿಕ್ಕೆ ಶ್ರಮಿಸಿದ ವಿಜ್ಞಾನ ಶಿಕ್ಷಕಿ ಕು. ಭುವನೇಶ್ವರಿ ಹಾಗೂ ಚಿತ್ರಕಲಾ ಶಿಕ್ಷಕಿ ಸೈಯದಾ ನಿಖತ ಪರ್ವಿನ್ ಇವರಿಗೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತುಕಾರಾಮ ಜಾದುಗಾರ ಮಕ್ಕಳಿಗೆ ಜಾದು ಕಾರ್ಯಕ್ರಮ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರು ಬಸಪ್ಪಾ ನೇಳಗೆ, ಶಿಕ್ಷಕರಾದ ಆನಂದ ದೀನೆ, ಬಸಯ್ಯಾ ಸ್ವಾಮಿ, ಬಸಪ್ಪಾ ನೇಳಗೆ, ಅರವಿಂದ ಜ್ಯಾಂತಿ, ಅಶೋಕ ಸಿಂದೋಲ್, ಅನೀತಾ ಸೇರಿದಂತೆ ಶಾಲೆಯ ಶಿಕ್ಷಕ, ಶಿಕ್ಷಕಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಶಿವಕುಮಾರ ಸದಾಫುಲೆ ಸ್ವಾಗತಿಸಿದರು. ಪರಸಪ್ಪ ನಾಗವಿ ಕಾರ್ಯಕ್ರಮ ನಿರೂಪಿಸಿ ಚಂದ್ರಕಲಾ ವಂದಿಸಿದರು.