ಮಕ್ಕಳು  ದೇಶದ ಭವಿಷ್ಯದ ಭದ್ರ ಬುನಾದಿ;ನಾಗೇಂದ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.15: ತಾಲೂಕಿನ‌ ರೂಪನಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿನ್ನೆ ಭೇಟಿ ನೀಡಿದ   ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು  ಶಾಲಾ ಮಕ್ಕಳನ್ನು ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಅವರು  ಇಂದು ನವೆಂಬರ್ 14, ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ಇಂದು ನಾವೆಲ್ಲ ನಮ್ಮ ಮಾಜಿ ಪ್ರಧಾನ ಮಂತ್ರಿ  ಪಂಡಿತ್ ಜವಾಹರ ಲಾಲ್ ನೆಹರೂರವರ 133 ನೇ ಹುಟ್ಟುಹಬ್ಬ ವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಇಲ್ಲಿ ಸೇರಿದ್ದೇವೆಂದರು.
 ಭಾರತದ ಸ್ವಾತಂತ್ರ್ಯ ನಂತರದ ಮೊಟ್ಟ ಮೊದಲ ಪ್ರಧಾನಿಯಾದ ನೆಹರು. ಅವರು ಆರಂಭದಿಂದಲೂ ಮಕ್ಕಳ ಬಗ್ಗೆ ಅತೀವವಾದ ಕಾಳಜಿಯನ್ನು ಮತ್ತು ಪ್ರೀತಿಯನ್ನು ಹೊಂದಿದ್ದರು. ರಾಷ್ಟ್ರ ನಾಯಕರಲ್ಲಿ ಮಕ್ಕಳ ಜೊತೆಗೆ ಅತಿ ಹೆಚ್ಚು ಪ್ರೀತಿಯ ಬಾಂಧವ್ಯವನ್ನು ಹೊಂದಿದವರು ಅವರೆಂದರು.
ನೆಹರು ಅವರು ಹೇಳಿದಂತೆ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ನಮ್ಮ ಭಾರತ ದೇಶದ ಯಾವುದೇ ಮಕ್ಕಳನ್ನು ವಿದ್ಯಾಭ್ಯಾಸ ದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಸದಾ ಹೇಳುತ್ತಿದ್ದರು ಮತ್ತು ಅದರಂತೆ ಕಾನೂನುಗಳನ್ನು ಸಹ ತಂದರು. ಮಕ್ಕಳ ಬಗ್ಗೆ ಹಾಗೂ ರಾಷ್ಟ್ರದ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದ ನೆಹರು ರವರಿಗೆ ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂಬ ಬಿರುದನ್ನು ಕೊಟ್ಟರು  ಎಂದು ತಿಳಿಸಿದರು.
ನಾವು ಈಗ  ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಆಗಲಿದ್ದಾರೆ. ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ ಎಂದರು.