ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆ

ಕೋಲಾರ,ಡಿ.೮- ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕವಾಗಿ, ದೈಹಿಕವಾಗಿ ಸದೃಢಗೊಳ್ಳಬೇಕೆಂದು ಬಿ.ಇ.ಓ ಕಚೇರಿಯ ಇ.ಸಿ.ಓ ಮುನಿರತ್ನಯ್ಯಶೆಟ್ಟಿ ಹೇಳಿದರು.
ನಗರದ ಕೆಎಚ್‌ಬಿ ಕಾಲೋನಿ ಹಾರೋಹಳ್ಳಿ ಬಡಾವಣೆಯಲ್ಲಿರುವ ಶುಭಲ ವಿದ್ಯಾಲಯದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದರ ಜೊತೆ-ಜೊತೆಗೆ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾಧನೆ ಮಾಡಿ ತಮ್ಮ ಕುಟುಂಬಕ್ಕೂ ದೇಶಕ್ಕೂ ಕೀರ್ತಿಯನ್ನು ತರಬೇಕು ಎಂದರು.
. ಪ್ರಪಂಚಕ್ಕೆ ಯೋಗಾಸನ ಪರಿಚಯಿಸಿದ್ದು ಭಾರತ ದೇಶ ಈ ಯೋಗಾಸನವನ್ನು ತಾವು ಅನುಸರಿಸುವುದರ ಮೂಲಕ ತಮ್ಮ ಆರೋಗ್ಯದ ಸ್ಥಿತಿಯನ್ನು ಉತ್ತಮವಾಗಿಟ್ಟುಕೊಳ್ಳಬೇಕೆಂದು ಹಾಗೂ ೧೦ ರಿಂದ ೨೦ರ ವಯಸ್ಸು ಬಹಳ ಮುಖ್ಯವಾದದ್ದು, ಈ ವಯಸ್ಸಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಬೇಕೆಂದು ತಿಳಿಸಿದರು.
ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಇ.ಓ ಮುನಿರಾಜು ಮಾತನಾಡುತ್ತಾ, ಪೋಷಕರು ತಮ್ಮವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟು ಉತ್ತಮ ಸಂಸ್ಕಾರವಂತರನ್ನಾಗಿ ಮಾಡಬೇಕು. ಪ್ರತಿಯೊಬ್ಬರೂ ಸಹ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು. ಮುಂದೆ ಸಮಾಜಸೇವೆ ಹಾಗೂ ದೇಶಸೇವೆಗೆ ಸೇರಬೇಕೆಂದರು. ಮಕ್ಕಳು ತಂದೆ ತಾಯಿಗಳನ್ನು ಅನುಕರಣೆ ಮಾಡುತ್ತಾರೆ ಆದ್ದರಿಂದ ತಂದೆ-ತಾಯಿಗಳು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಉದಾಹರಿಸಿದರು.
ಶಾಲಾ ಪ್ರಾಂಶುಪಾಲ ಬಿ.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, “ಆರೋಗ್ಯವೇ ಮಹಾಭಾಗ್ಯ ಮಕ್ಕಳು ಕ್ರೀಡೆಗಳನ್ನು ಆಡುವುದರಿಂದ ಸೋಲು ಗೆಲುವುಗಳ ಮಹತ್ವವನ್ನು ಅರಿಯುವರು. ಕ್ರೀಡೆಗಳು ಮಕ್ಕಳಲ್ಲಿ ವ್ಯಕ್ತಿತ್ವ ರೂಪಿಸುವುದರ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಜೀವನದಲ್ಲಿ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ವ್ಯಾಯಾಮ, ಉಪವಾಸ, ನಗುವುದು, ಕಾಲುನಡಿಗೆ ಇವು ಆರೋಗ್ಯಕ್ಕೆ ಸೂಕ್ತ ಔಷಧವಾಗುತ್ತದೆ. ಆರೋಗ್ಯವಿಲ್ಲದಿದ್ದರೆ ಜೀವನದಲ್ಲಿ ಯಾವುದನ್ನು ಸಾಧಿಸಲಾಗುವುದಿಲ್ಲ. ಯಾವುದೇ ಕೆಲಸದಲ್ಲಿ ಸಿದ್ಧಿಯನ್ನು ಪಡೆಯದೆ ಪ್ರಸಿದ್ಧಿಯನ್ನುಪಡೆಯಲು ಸಾಧ್ಯವಿಲ್ಲವೆಂದರು. ಆದ್ದರಿಂದ ಪೋಷಕರು ಮಕ್ಕಳಿಗೆ ಸಹಕರಿಸಿ ಪ್ರೋತ್ಸಾಹಿಸಬೇಕೆಂದು ಹೇಳಿದರು.
ಪಥಸಂಚಲನದಿಂದ ಪ್ರಾರಂಭವಾಗಿ ನಂತರ ಸ್ವಾಗತ ನೃತ್ಯ, ಪ್ರಾಂಶುಪಾಲರಿಂದ ಅತಿಥಿಗಳ ಸ್ವಾಗತ ನಂತರದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಎನ್ ರವರು ಶಾಲಾ ವರದಿ ಮಂಡಿಸಿದರು.
ತದ ನಂತರದಲ್ಲಿ ಫ್ರೀಕೆ.ಜಿಯಿಂದ ೧೦ನೇ ತರಗತಿಯವರೆಗೆ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಶಾಲೆಯಿಂದ ಅವಾರ್ಡ್ ಫಾರ್ ಎಕ್ಸಲೆನ್ಸ್ ಎಂಬ ಬಹುಮಾನವನ್ನು ನೀಡಲಾಯಿತು. ಶಾಲಾಕ್ರೀಡೆಗಳಲ್ಲಿ ಭಾಗವಹಿಸಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಣೆ. ಪೋಷಕರಿಗೆ ಕ್ರೀಡೆ ಹಾಗೂ ಬಹುಮಾನ ವಿತರಣೆ ನಡೆಯಿತು. ನಂತರದಲ್ಲಿ ಕ್ರೀಡಾ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾಪ್ರಾಂಶುಪಾಲ ಬಿ.ಲಕ್ಷ್ಮಿನಾರಾಯಣ ಸ್ವಾಗತಿಸಿ, ೧೦ನೇ ತರಗತಿ ವಿದ್ಯಾರ್ಥಿನಿ ಬಾಹಿಯಾನಾಜ್, ಬೈರೇಶ್ ನಿರೂಪಿಸಿ, ಶಿಕ್ಷಕ ಶ್ರೀನಿವಾಸ ವಂದಿಸಿದರು.