ಮಕ್ಕಳು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈರಣ್ಣ ಬಿರಾದಾರ ಕರೆ

ವಿಜಯಪುರ, ನ.20-ದಿ. ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ ( ಎ. ಪಿ.ಡಿ.) ಹಾಗೂ ಬಿ. ಎಲ್. ಡಿ.ಈ.ಸಂಸ್ಥೆಯ ಎ. ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ಯ ವಿಶೇಷ ಚೇತನ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲೆ,ವೇಷಭೂಷಣ, ಹಾಗೂ ವಿದ್ಯಾರ್ಥಿ ಪಾಲಕರಿಗಾಗಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಬಿ.ಎಲ್. ಡಿ. ಈ.ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯ ಕಾಲೇಜಿನಲ್ಲಿ ನೆರವೇರಿಸಲಾಯಿತು.
ಎ.ಪಿ.ಡಿ.ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀ ಈರಣ್ಣ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದರಲ್ಲಿ ಇರುವ ಸುಖ ನೆಮ್ಮದಿ ಇನ್ನಾವುದೇ ಕೆಲಸ ಕಾರ್ಯಗಳಲ್ಲಿ ಸಿಗಲು ಸಾಧ್ಯವಿಲ್ಲ, ಮಕ್ಕಳ ಸೇವೆಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಾವೆಲ್ಲರೂ ಈ ಸಂಸ್ಥೆಯನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾದ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಹಾಗೂ ಮುಖ್ಯ ಅತಿಥಿಗಳಾದ ಶ್ರೀ ಶುಭಂ ವಾಡೆಕರ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ನಾಡ ರಕ್ಷಣಾ ವೇದಿಕೆ, ವಿಜಯಪುರ ಜಿಲ್ಲಾಧ್ಯಕ್ಷ ಸುರೇಶ ಜತ್ತಿ ಮಾತನಾಡಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂರವರಿಗೆ ಮಕ್ಕಳೆಂದರೆ ವಿಶೇಷ ಪ್ರೀತಿ, ಕಾಳಜಿ, ಮಕ್ಕಳೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು.ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟು ಮಕ್ಕಳಲ್ಲಿ ಸಾಕ್ಷಾತ್ ದೇವರನ್ನು ಕಾಣುತ್ತಿದ್ದರು.ಅದಕ್ಕಾಗಿ ಅವರು ತಮ್ಮ ಜನ್ಮದಿನವಾದ ನವೆಂಬರ್ 14 ರ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಭಾರತೀಯರಿಗೆ ಕರೆ ಕೊಟ್ಟರು ಅದರಂತೆ ಪ್ರತಿವರ್ಷ ನವೆಂಬರ 14 ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾರೆ.
ಈ ಎ.ಪಿ.ಡಿ.ಸಂಸ್ಥೆ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ವಿಶೇಷ ಚೇತನ ಮಕ್ಕಳ ಸೇವೆಗೈಯುತ್ತಿರುವುದು ಸಾಕ್ಷಾತ್ ಪರಶಿವನ ಪೂಜೆಗಿಂತ ಶ್ರೇಷ್ಠ ಕಾರ್ಯವಾಗಿದೆ ಈ ನಿಮ್ಮ ಕಾರ್ಯಕ್ಕೆ ಆ ದೇವರು ಖಂಡಿತಾ ಮೆಚ್ಚುವನು. ಸಮಾಜದ ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಹಾಗೂ ನಾವೆಲ್ಲರೂ ದೇವರ ಪ್ರತಿರೂಪಿಗಳಾದ ಈ ವಿಶೇಷ ಚೇತನ ಮಕ್ಕಳತ್ತ ಗಮನಹರಿಸಿ ಅವರ ಕಣ್ಣೀರೊರೆಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ವಿಯಯಲಕ್ಷ್ಮೀ ಬೆನಕಟ್ಟಿಯವರು ಅತಿಥಿಯಾಗಿ ಪಾಲ್ಗೊಂಡಿದ್ದರು,ಸಮಾಜ ಸೇವರಾದ ಮಹೇಶ ಮುಧೋಳ ಅವರು ಮಕ್ಕಳ ಪ್ರಶಸ್ತಿಗೆ ಧನಸಹಾಯ ಮಾಡಿದರು. ಎ.ಪಿ.ಡಿ.ಸಿಬ್ಬಂದಿಗಳಾದ ಮಲ್ಲಪ್ಪ ಕುರ್ಲಿ,ಬಸವರಾಜ ಕುಂಬಾರ,ಇಮಾಮಸಾಬ್,ವಿಜಯಲಕ್ಷ್ಮೀ,ವಿನೋದ ಎಲಿಬಳ್ಳಿ, ಆಯುರ್ವೇದ ಕಾಲೇಜಿನ ಸಿಬ್ಬಂದಿಗಳು ಭಾಗವಹಿಸಿದರು