ಮಕ್ಕಳಿಬ್ಬರನ್ನ ಅನಾಥರನ್ನಾಗಿಸಿದ ಕೊರೋನಾ: ಮೃತ ಪೋಷಕರ ಕನಸು ನನಸಿಗಾಗಿ ಮಗಳ ಛಲ..!!

ವಿಶೇಷ ವರದಿ : ಸಂತೋಷ್ ಸಂಶಿ, ಕಂಪ್ಲಿ
ಕಂಪ್ಲಿ ಜೂ 03 : “ಕೊರೋನಾ ಎನ್ನುವ ಮಹಾಮಾರಿ ನಮ್ಮ ತಂದೆ-ತಾಯಿಯನ್ನು ದೂರ ಮಾಡಿರಬಹುದು. ಆದರೆ ಪೋಷಕರು ಕಂಡ ಕನಸು ನಮ್ಮಲ್ಲಿ ಇನ್ನೂ ಜೀವಂತವಾಗಿವೆ. ಅದೇನೆ ಕಷ್ಟ ಬಂದರೂ ಎದುರಾದರೂ ಸಹ ನಾನು ಶಿಕ್ಷಕಿಯಾಗುವ ಕನಸು ಕಂಡಿದ್ದ ನಮ್ಮ ಪೋಷಕರ ಕನಸು ನನಸು ಮಾಡುವುದೇ ನನ್ನ ಗುರಿ…”
ಹೌದು… ಪಟ್ಟಣದ 5ನೇ ವಾರ್ಡ್ ಇಂದಿರಾನಗರ ಬಡಾವಣೆಯ ಕೊರೋನಾ ಸೋಂಕಿನಿಂದ ಮೃತಪಟ್ಟ ಮಾರೆಪ್ಪ ಮತ್ತು ಉಮ್ಮಕ್ಕ ದಂಪತಿಗಳ ಪುತ್ರಿ ಎನ್.ರಾಶಿ ಆಡಿದ ಹೃದಯಸ್ಪರ್ಶಿ ಮಾತುಗಳಿವು.

ಕೊರೋನಾಗೆ ಪೋಷಕರು ಬಲಿ, ಪೋಷಕರ ಆಸೆ ಈಡೇರಿಸುವ ಗುರಿಯಲ್ಲಿ ಮಗಳು:-


ಕಳೆದ ಮೇ.27ಕ್ಕೆ ಮಾರೆಪ್ಪ(55) ಮತ್ತು ಉಮ್ಮಕ್ಕ(44) ಇಬ್ಬರಿಗೂ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳ್ಳಾರಿ, ಹೊಸಪೇಟೆ ಸೇರಿದಂತೆ ನಾನಾ ಕಡೆಗಳಲ್ಲು ಪ್ರಯತ್ನಿಸಿದರೂ ಆಕ್ಸಿಜನ್ ವೆಂಟಿಲೇಟರ್‍ವುಳ್ಳ ಹಾಸಿಗೆ ವ್ಯವಸ್ಥೆ ಲಭಿಸದ ಕಾರಣ ದಂಪತಿಯಿಬ್ಬರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಮೇ.30ಕ್ಕೆ ಪತಿ ದೇವರಮನೆ ಮಾರೆಪ್ಪ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಇದರ ಬೆನ್ನಲ್ಲೆ ಮೇ.31ರಂದು ಪತ್ನಿ ಉಮ್ಮಕ್ಕ ಕೂಡ ನಿಧನರಾಗಿದ್ದು ದುರಾದೃಷ್ಟಕರ ಸಂಗತಿ. ತಂದೆ-ತಾಯಿಯನ್ನು ಕಳೆದುಕೊಂಡ ಎನ್.ರಾಶಿ ಹಾಗು ರಮೇಶ್ ಅನಾಥರಾಗಿದ್ದಾರೆ. ಏಕಾಏಕಿ ತಂದೆ-ತಾಯಿ ಇಬ್ಬರೂ ಕೊರೋನಾಗೆ ಬಲಿಯಾಗಿದ್ದು ಮಕ್ಕಳಿಬ್ಬರನ್ನು ದಿಗ್ಭ್ರಾಂತಗೊಳಿಸಿದೆ. ಜೊತೆಗೆ ಜೀವನದ ಭವಿಷ್ಯದ ಬಗೆಗೂ ನಾನಾ ಪ್ರಶ್ನೆಗಳು ಮಕ್ಕಳಲ್ಲಿ ಕಾಡಲಾರಂಭಿಸಿದೆ. ಮಗಳು ಎನ್.ರಾಶಿ ಶಿಕ್ಷಕಿಯಾಗಬೇಕೆಂಬುದು ಕೊರೋನಾದಿಂದ ಮೃತಪಟ್ಟ ಪೋಷಕರಿಬ್ಬರು ಮಹದಾಸೆಯಾಗಿತ್ತಂತೆ. ಹೀಗಾಗಿ, ನನ್ನ ತಂದೆ-ತಾಯಿ ಆತ್ಮಕ್ಕೆ ಶಾಂತಿ ಕೊಡಿಸುವ ಸಲುವಾದರೂ ಅವರ ಆಸೆಯಂತೆ ನಾನು ಚೆನ್ನಾಗಿ ವ್ಯಾಸಂಗ ಮಾಡಿ ಶಿಕ್ಷಕಿಯಾಗುತ್ತೇನೆ ಎಂದು ಕಣ್ಣೀರಿಡುತ್ತಲೇ ತನ್ನ ದಿಟ್ಟ ಗುರಿಯ ಬಗೆಗಿನ ಮಾತುಗಳನ್ನು ಎನ್.ರಾಶಿ ಸಂಜೆವಾಣಿಯೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪೋಷಕರ ಅಗಲಿಕೆಯಿಂದ ಬದುಕು ದುಸ್ತರ; ಮಗಳ ಉನ್ನತ ವ್ಯಾಸಂಗಕ್ಕೆ ಬೇಕಿದೆ ಸಹಾಯ:-


ಹೌದು… ಕೊರೋನಾದಿಂದ ಮೃತಪಟ್ಟ ಮಾರೆಪ್ಪ ಮತ್ತು ಉಮ್ಮಕ್ಕ ಎನ್ನುವ ದಂಪತಿಗಳಿಗೆ ರಮೇಶ್ ಹಾಗು ಎನ್.ರಾಶಿ ಎನ್ನುವ ಇಬ್ಬರು ಮಕ್ಕಳು. ಹಿರಿಯ ಮಗ ರಮೇಶ್ 8ನೇ ತರಗತಿಗೆ ವ್ಯಾಸಂಗ ಸ್ಥಗಿತಗೊಳಿಸಿದ್ದು ಮನೆಯ ಕಷ್ಟಕ್ಕಾಗಿ ದುಡಿಮೆಯ ದಾರಿ ಹಿಡಿದಿದ್ದಾನೆ. ಸದ್ಯ ದಿನಗೂಲಿ ಕೆಲಸ ಮಾಡುತ್ತಲೇ ತಂದೆ-ತಾಯಿಯರ ದುಡಿಮೆ ಜೊತೆಗೆ ತಂಗಿ ಎನ್.ರಾಶಿ ಅವರ ವ್ಯಾಸಂಗಕ್ಕೆ ಸಾಥ್ ನೀಡುತ್ತಿದ್ದಾನೆ. ಇನ್ನು ಶಿಕ್ಷಕಿಯಾಗುವ ಕನಸೊತ್ತಿರುವ ಎನ್.ರಾಶಿ ಸದ್ಯ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಪೋಷಕರ ಆಸೆಯಂತೆ ಶಿಕ್ಷಕಿ ಹುದ್ದೆಗೇರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮಹದಾಸೆ ಹೊತ್ತಿರುವ ಯುವತಿ ರಾಶಿಗೆ ಪೋಷಕರ ಆಕಸ್ಮಿಕ ಮರಣದಿಂದ ಆಘಾತ ಎದುರಾದಂತಾಗಿದೆ. ಆದರೆ, ತಂದೆ-ತಾಯಿಯ ಅಗಲಿಕೆಯ ನೋವಿನಲ್ಲು ಅವರ ಆಸೆಯಂತೆ ಶಿಕ್ಷಕಿಯಾಗುವ ಕನಸನ್ನೇ ತನ್ನ ಜೀವನದ ಪ್ರಮುಖ ಗುರಿಯನ್ನಾಗಿಸಿಕೊಂಡಿದ್ದಾಳೆ ರಾಶಿ. ಹೀಗೆ ಶಿಕ್ಷಕಿ ಕನಸನ್ನೊತ್ತ ಯುವತಿ ಸದ್ಯ ತನ್ನ ವ್ಯಾಸಂಗಕ್ಕೆ ನೆರವಿನ ನಿರೀಕ್ಷೆಯಲ್ಲಿದ್ದಾಳೆ.

ಮೇ.2ರ ಬುಧವಾರದಂದು ಕೊರೋನಾದಿಂದ ಮೃತಪಟ್ಟ ದಂಪತಿಗಳ ನಿವಾಸಕ್ಕೆ ಹೊಸಪೇಟೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ್ ಹಾಗು ಸ್ಥಳೀಯ ಶಾಸಕ ಜೆ.ಎನ್.ಗಣೇಶ್ ಅವರು ಭೇಟಿ ನೀಡಿ ಮೃತ ದಂಪತಿಗಳ ಇಬ್ಬರು ಮಕ್ಕಳಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಎನ್.ರಾಶಿ ಮುಂದಿನ ಶಿಕ್ಷಣಭ್ಯಾಸಕ್ಕೆ ಮುಖ್ಯಮಂತ್ರಿ ಬಾಲಸೇವೆ ಯೋಜನೆಯಡಿ ಪ್ರಾಯೋಜಕತ್ವದಡಿಯಲ್ಲಿ ಸಹಾಯಧನ ಒದಗಿಸುವ ಭರವಸೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ್ದಾರೆ. ಇನ್ನು ಪೋಷಕರನ್ನು ಕಳೆದುಕೊಂಡ ಮಕ್ಕಳಿಬ್ಬರಿಗೂ ಯಾವುದೇ ಸಂಕಷ್ಟ ಸಂದರ್ಭದಲ್ಲಿಯೂ ಕೂಡ ಸಹಾಯ ಮಾಡಲಾಗುವುದು ಎಂದು ಶಾಸಕ ಗಣೇಶ್ ಭರವಸೆ ನೀಡಿದ್ದಾರೆ. ಆದರೆ, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ತಂದೆ-ತಾಯಿಯರಿಬ್ಬರು ಮೃತಪಟ್ಟಿದ್ದು, ಜೀವನ ನಿರ್ವಹಿಸುವುದು ಹೇಗೆ ಎನ್ನುವ ಚಿಂತೆ ಮೃತ ದಂಪತಿಗಳ ಮಕ್ಕಳಲ್ಲಿ ಕಾಡುತ್ತಿದೆ. ಇನ್ನು 5ನೇ ವಾರ್ಡ್ ಪುರಸಭೆ ಕಾಂಗ್ರೆಸ್ ಸದಸ್ಯರಾದ ಜಿ.ಸುಮ ಮೃತ ದಂಪತಿಗಳ ಮಕ್ಕಳಿಬ್ಬರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಲ್ಲೊಂದಾದ ವಸತಿ ಮನೆ ಸೇರಿದಂತೆ ಇನ್ನಿತರೆ ಸರ್ಕಾರದ ಸವಲತ್ತುಗಳನ್ನೊದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದಿದ್ದಾರೆ.

ಶಿಕ್ಷಣಕ್ಕಾಗಿ ಹೆಚ್ಚುವರಿ ಸಹಾಯ ನಿರೀಕ್ಷೆಯಲ್ಲಿ ಎನ್.ರಾಶಿ:-


ಸದ್ಯ ಅಧಿಕಾರಿಗಳು ಹಾಗು ಶಾಸಕರು ಮೃತ ದಂಪತಿಗಳ ಮಕ್ಕಳಿಬ್ಬರಿಗೆ ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರಾದರೂ, ಕೊಡುಗೈ ದಾನಿಗಳು ಸಹಾಯ ಮಾಡುವ ಮನಸ್ಸಿದ್ದಲ್ಲಿ ಸಹಾಯ ಮಾಡಬಹುದು ಎಂದು ಎನ್.ರಾಶಿ ಮನವಿ ಮಾಡಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ ನಾವು ಸದ್ಯ ಸಹಾಯವಲ್ಲದೇ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ಎಂದು ನಿರಾಸೆ ಭಾವನೆಯಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಹೀಗಾಗಿ ಮೃತ ದಂಪತಿ ಮಗಳಾದ ಎನ್.ರಾಶಿ ಅವರ ಶಿಕ್ಷಕಿಯಾಗಬೇಕು ಎನ್ನುವ ಕನಸು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಆಕೆಯ ಶಿಕ್ಷಣಕ್ಕೆ ಅಥವಾ ಜೀವನದ ಅಗತ್ಯತೆಗಳನ್ನು ಪೂರೈಸುವಲ್ಲಿ ಸಹಾಯ ಮಾಡಲಿಚ್ಛಿಸುವವರು ಸಹಾಯ ಮಾಡಬಹುದು. ಮೃತ ದಂಪತಿಗಳ ಮಕ್ಕಳಿಗೆ ಸಹಾಯ ಮಾಡಲಿಚ್ಛಿಸುವವರು 9731149892,9380076890 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದು.

ಒಟ್ಟಾರೆಯಾಗಿ, ಒಂದು ಕಡೆ ಕೊರೋನಾ ರಕ್ಕಸದಾಟಕ್ಕೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ತೀರದ ನೋವು… ಮತ್ತೊಂದು ಕಡೆ ಕಣ್ಣೀರ ಸಾಗರದಲ್ಲಿ ಮುಳುಗಿದ್ದರೂ ತಂದೆ-ತಾಯಿಯರ ಆಸೆಯಂತೆ ಶಿಕ್ಷಕಿಯಾಗಲೇಬೇಕು ಎನ್ನುವ ಗುರಿ, ಹಠ… ಬಡತನದ ಬೇಗೆಯ ಕಿಚ್ಚಿನಲ್ಲಿ ನೊಂದಿರುವ ಹಾಗು ತಂದೆ-ತಾಯಿಯನ್ನು ಕಳೆದುಕೊಂಡ ನಮ್ಮನ್ನು ಸಾಕುವವರ್ಯಾರು..?, ಹಿರಿಯರಿಲ್ಲದ ನಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಳ್ಳುವುದೇಗೆ ಎನ್ನುವ ನಾನಾ ಗೊಂದಲಗಳ ಮಧ್ಯೆಯೇ ಪೋಷಕರ ಆಸೆಯನ್ನ ಈಡೇರಿಸುವುದೇ ತನ್ನ ಜೀವನದ ಗುರಿಯನ್ನಾಗಿಸಿಕೊಂಡಿರುವ ಯುವತಿ ಎನ್.ರಾಶಿಗೆ ಉಳ್ಳವರ, ಕೊಡುಗೈ ದಾನಿಗಳ ಸಹಾಯ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.