ಕೋಲಾರ, ಮೇ ೩೦- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾರಂಭದಂದು ಆಗಮಿಸಿದ ಚಿಣ್ಣರನ್ನು ಸ್ವಾಗತಿಸಿ, ಮೊದಲ ದಿನವೇ ಪಠ್ಯಪುಸ್ತಕ,ಸಮವಸ್ತ್ರವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎ.ಮಹೇಂದ್ರ ಹಾಗೂ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ವಿತರಿಸಿದರು.
ಸಮವಸ್ತ್ರ ವಿತರಿಸಿದ ಎಸ್‌ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಮಾತನಾಡಿ, ಪಠ್ಯಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ, ವಿನಯವಂತಿಕೆ ಇರಲಿ, ಗುರುಹಿರಿಯರ ಬಗ್ಗೆ ಗೌರವ ಹೊಂದಿ ಮುನ್ನಡೆದರೆ ನಿಮ್ಮ ಶೈಕ್ಷಣಿಕ ಬದುಕು ಸಾಕಾರಗೊಳ್ಳುತ್ತದೆ, ನೀವು ಸಾಧಕರಾಗುತ್ತೀರಿ ಎಂದರು.
ಶಾಲೆಯಲ್ಲಿ ಶೌಚಾಲಯ ಬಳಸಿದ ನಂತರ ನೀರು ಹಾಕುವುದನ್ನು ಮರೆಯದಿರಿ, ಸ್ವಚ್ಚತೆ ಅತಿ ಮುಖ್ಯ, ಅನೇಕ ರೋಗಗಳಿಂದ ಮುಕ್ತರಾಗಿ ಕಲಿಕೆ ಸದೃಢಗೊಳ್ಳಲು ಆರೋಗ್ಯವೂ ಅತಿ ಮುಖ್ಯ ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಕೀಳಿರಿಮೆ ಬೇಡ, ಅನೇಕ ಸಾಧಕರು ಇಲ್ಲೇ ಓದಿದವರು, ಗುಣಾತ್ಮಕ ಶಿಕ್ಷಣದ ಮೂಲಕ ಶೇ.೧೦೦ ಸಾಧನೆಯತ್ತ ಸಾಗುತ್ತಿದ್ದೇವೆ, ಸಮಾನ ಶಿಕ್ಷಣಕ್ಕಾಗಿ ಈ ಶಾಲೆಗಳ ಬಲವರ್ಧನೆ ಅಗತ್ಯ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಪೈಪೋಟಿಯನ್ನು ನಮ್ಮ ಶಿಕ್ಷಕರು ಸಮರ್ಥವಾಗಿ ಎದುರಿಸಿದ್ದಾರೆ, ಗುಣಾತ್ಮಕತೆಯಲ್ಲಿ ಸಾಧನೆ ಮಾಡಿದ್ದಾರೆ ಎಂದ ಅವರು, ಇಲ್ಲಿ ನೀಡುವ ಉಚಿತ ಪಠ್ಯ,ಬಿಸಿಯೂಟ,ಕ್ಷೀರಭಾಗ್ಯ, ಶೂಭಾಗ್ಯ ಮತ್ತಿತರ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಿ ಎಂದು ಮಕ್ಕಳಿಗೆ ಕರೆ ನೀಡಿದರು.
ಶಿಕ್ಷಕರು ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ತಂದುಕೊಟ್ಟಿದ್ದೀರಿ, ಈ ವರ್ಷ ನಿಮ್ಮಿಂದ ಮತ್ತಷ್ಟು ನಿರೀಕ್ಷೆಗಳು ಇಲಾಖೆಯದ್ದಾಗಿದೆ, ಅದನ್ನು ಹುಸಿಯಾಗಿಸದೇ ಬದ್ದತೆಯಿಂದ ಕೆಲಸ ಮಾಡಿ ಎಂದರು.
ಪ್ರೌಢಶಾಲೆಯಲ್ಲಿ ಬಡ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ದಾನಿಗಳ ನೆರವಿನಿಂದ ಅನೇಕ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ, ಇದರ ಸದುಪಯೋಗದೊಂದಿಗೆ ಶೈಕ್ಷಣಿಕ ಪ್ರಗತಿಯೂ ತೋರಬೇಕೆಂದರು.
ಶಿಕ್ಷಕರು ಮಕ್ಕಳಲ್ಲಿ ಶಾಲೆಯನ್ನು ದೇಗುಲವೆಂಬಂತೆ ಬಿಂಬಿಸಬೇಕು, ಮಕ್ಕಳು ಸಹಾ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ಧೈರ್ಯವಾಗಿ ಶಿಕ್ಷಕರಿಗೆ ಹೇಳಿ ಪರಿಹರಿಸಿಕೊಳ್ಳಬೇಕು ಎಂದರು.
ಶಿಕ್ಷಕರ ಸಂಘಟಿತ ಪರಿಶ್ರಮ, ಗುಂಪು ಅಧ್ಯಯನ ಈ ಬಾರಿ ಶಾಲೆಗೆ ಉತ್ತಮ ಫಲಿತಾಂಶ ಬರಲು ಕಾರಣವಾಗಿದೆ ಎಂದು ತಿಳಿಸಿ ಎಲ್ಲಾ ಶಿಕ್ಷಕರಿಗೂ ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ,ಸುಗುಣಾ, ಫರೀದಾ, ವೆಂಕಟರೆಡ್ಡಿ, ಕೆ.ಲೀಲಾ, ಸಿ.ಎಲ್.ಶ್ರೀನಿವಾಸಲು, ಡಿ.ಚಂದ್ರಶೇಖರ್, ಮತ್ತಿತರರು ಉಪಸ್ಥಿತರಿದ್ದರು.