ಮಕ್ಕಳಿಗೆ ಸೋಂಕು ಪೋಷಕರಿಗೆ ಅಳುಕು


ಬೆಂಗಳೂರು, ಡಿ. ೭- ಕೊರೊನಾ ಸೋಂಕಿನಿಂದ ಆತಂಕಕ್ಕೆ ಒಳಗಾಗಿದ್ದ ಪೋಷಕರು, ಒಮಿಕ್ರಾನ್ ವಕ್ಕರಿಸಿದ್ದರಿಂದ ಮತ್ತಷ್ಟು ದಿಗಿಲಿಗೆ ಒಳಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.
ರಾಜ್ಯದಲ್ಲಿ ಸೋಂಕು ಇಳಿಕೆಯಾಗುತ್ತಿದ್ದಂತೆ ಶಾಲಾ – ಕಾಲೇಜುಗಳನ್ನು ಹಂತಹಂತವಾಗಿ ಆರಂಭಿಸಲಾಯಿತು. ವಿದ್ಯಾರ್ಥಿಗಳು ಅಳುಕಿನಿಂದಲೇ ತರಗತಿಗಳಿಗೆ ಹಾಜರಾಗುತ್ತಿದ್ದಂತೆಯೇ ಒಮಿಕ್ರಾನ್ ಹಾವಳಿ ಹೆಚ್ಚಾಗುವುದರ ಜೊತೆಗೆ ಕೊರೊನಾ ಸೋಂಕು ವಿದ್ಯಾರ್ಥಿಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವುದರಿಂದ ಆತಂಕಕ್ಕೆ ಒಳಗಾಗಿರುವ ಪೋಷಕರು, ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ. ಹೀಗಾಗಿ ಶಾಲೆಗಳು ಆರಂಭವಾಗಿ ತಿಂಗಳುಗಳು ಕಳೆದರೂ, ವಿದ್ಯಾರ್ಥಿಗಳ ಹಾಜರಾತಿ ಕುಸಿಯುವಂತಾಗಿದೆ.
ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಒಮಿಕ್ರಾನ್ ಪತ್ತೆಯಾಗಿರುವ ಬೆನ್ನಲ್ಲೆ ಶಾಲೆಗಳಿಗೆ ಹಾಜರಾಗುವ ಮಕ್ಕಳ ಪೋಷಕರು ೨ ಡೋಸ್ ಲಸಿಕೆ ಪಡೆದಿರಬೇಕು ಎಂಬ ನಿಯಮದಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಲಾಗಿತ್ತು. ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇ. ೧೦೦ ರಷ್ಟು ಇರದಿದ್ದರೂ ಗಣನೀಯ ಪ್ರಮಾಣದಲ್ಲಿ ಮಕ್ಕಳು ಆನ್‌ಲೈನ್ ಬಿಟ್ಟು ಆಫ್‌ಲೈನ್ ತರಗತಿಗಳಿಗೆ ಹಾಜರಾಗಿದ್ದರು.
ಈಗ ರಾಜ್ಯದಲ್ಲಿ ಕೊರೊನಾ ರೂಪಾಂತರ ತಳಿ ಒಮಿಕ್ರಾನ್ ಪತ್ತೆಯಾಗಿರುವುದು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು, ಜತೆಗೆ ಶಾಲೆಗಳಿಗೆ ಹಾಜರಾಗುವ ಮಕ್ಕಳ ಪೋಷಕರು ೨ ಡೋಸ್ ಲಸಿಕೆ ಪಡೆದಿರಬೇಕು ಎಂಬ ನಿಯಮಗಳಿಂದ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಮತ್ತಷ್ಟು ಇಳಿಕೆಯಾಗಿದೆ.
ಸರ್ಕಾರದ ನಿಯಮದ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಪೋಷಕರಿಗೆ ೨ ಡೋಸ್ ಲಸಿಕಾ ಪ್ರಮಾಣ ಪತ್ರವನ್ನು ಒದಗಿಸುವಂತೆ ಸೂಚಿಸಿದೆ.
೨ ಡೋಸ್ ಲಸಿಕೆ ಪಡೆಯದ ಪೋಷಕರ ಮಕ್ಕಳಿಗೆ ಶಾಲೆಗಳಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ಶಾಲಾ ಆಡಳಿತ ಮಂಡಳಿಗಳು ಹೇಳಿದ್ದು, ಇದರಿಂದ ಆಫ್‌ಲೈನ್ ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
೨ ಡೋಸ್ ಲಸಿಕೆ ಪಡೆಯದೆ ಪೋಷಕರು ತಮ್ಮ ಮಕ್ಕಳನ್ನು ಆನ್‌ಲೈನ್‌ನಲ್ಲೆ ತರಗತಿಗಳಿಗೆ ಹಾಜರಾಗುವಂತೆಯೂ ಕೆಲ ಶಾಲೆಗಳು ಈಗಾಗಲೇ ಸೂಚನೆ ನೀಡಿವೆ. ಹಾಗಾಗಿ ಆಫ್‌ಲೈನ್ ತರಗತಿಗಳಿಗೆ ಹಾಜರಾತಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿವೆ.
ಶಾಲಾ-ಆಡಳಿತ ಮಂಡಳಿಗಳು ಆಫ್‌ಲೈನ್, ಆನ್‌ಲೈನ್ ಎರಡೂ ತರಗತಿಗಳಲ್ಲಿ ಬೋಧಿಸಲು ಶಿಕ್ಷಕರ ಕೊರತೆಯಿಂದ ಬಳಲುತ್ತಿದ್ದು, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾದರೆ ಆನ್‌ಲೈನ್ ತರಗತಿಗಳಿಗೆ ಹೆಚ್ಚು ಒತ್ತು ನೀಡುವ ಅಗತ್ಯ ಬೀಳಲಿದ್ದು, ಶಿಕ್ಷಕರಿಗೆ ಆಫ್‌ಲೈನ್, ಆನ್‌ಲೈನ್ ಎರಡರಲ್ಲೂ ಪಾಠ ಮಾಡುವ ಅನಿವಾರ್ಯತೆ ಎದುರಾಗಲಿದೆ.
ರಾಜ್ಯದಲ್ಲಿ ಸೋಂಕು ಹೆಚ್ಚಾದರೆ ಶಾಲಾ- ಕಾಲೇಜು ಬಂದ್ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿರುವ ನಡುವೆಯೇ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳ ಪೈಕಿ ೧೩೦ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಹೊಸ ಮಾದರಿಯ ರೂಪಾಂತರ ಸೋಂಕು ಓಮಿಕ್ರಾನ್ ಆತಂಕದ ನಡುವೆಯೇ ರಾಜ್ಯದ ಕೆಲ ವೈದ್ಯಕೀಯ ಕಾಲೇಜುಗಳು ಸೇರಿದಂತೆ ಶಾಲಾ ಕಾಲೇಜುಗಳಲ್ಲಿ ಕೊರೊನಾ ಸೋಂಕು ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಅಂಕಿ ಸಂಖ್ಯೆಯಲ್ಲಿ ತಿಳಿಸಿದೆ.
ಒಂದರಿಂದ ಹತ್ತನೇ ತರಗತಿಯ ಹಲವು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದ್ದು ಅದರಲ್ಲಿ ಕೆಲವು ವಿದ್ಯಾರ್ಥಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಇನ್ನೂ ಕೆಲವು ವಿದ್ಯಾರ್ಥಿಗಳು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ದಾಖಲಾಗಿರುವ ಶಾಲಾ-ಕಾಲೇಜುಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕ ೯೨ ಮಂದಿಗೆ ಕಾಣಿಸಿಕೊಂಡಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಸೋಂಕು:
ರಾಜ್ಯದ ಶಾಲಾ ಕಾಲೇಜುಗಳಲ್ಲಿ ೧೩೦ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಯಾವ ಯಾವ ಶೈಕ್ಷಣಿಕ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನುವ ವಿವರ ಇಲ್ಲಿದೆ.
ಇನ್ನುಳಿದಂತೆ ಕೊಡಗು ಜಿಲ್ಲೆಯಲ್ಲಿ ೧೧ ,ಚಾಮರಾಜನಗರ ಜಿಲ್ಲೆಯಲ್ಲಿ ೭, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ೫ , ಹಾಸನ ೪, ಬೆಂಗಳೂರು ಉತ್ತರ, ಚಿತ್ರದುರ್ಗ, ಧಾರವಾಡ, ಮೈಸೂರು ಜಿಲ್ಲೆಯಲ್ಲಿ ತಲಾ ಎರಡು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.ಗದಗ ಶಿವಮೊಗ್ಗ ಮತ್ತು ಶಿರಸಿಯಲ್ಲಿ ತಲಾ ಓರ್ವ ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ಶಾಲಾ-ಕಾಲೇಜುಗಳನ್ನು ಮಾಡಲು ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಪರೀಕ್ಷೆ ಹೆಚ್ಚಳಕ್ಕೆ ಸೂಚನೆ
ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಗಳ ಶಾಲಾ ಕಾಲೇಜುಗಳ ಪೈಕಿ ೧೩೦ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲಾ – ಕಾಲೇಜಿಗಳಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ.
ಸೋಂಕು ಪತ್ತೆ ಪರೀಕ್ಷೆ ನಡೆಸುವುದರಿಂದ ಸೋಂಕು ಹರಡದಂತೆ ತಡೆಯಲು ಸಹಕಾರಿಯಾಗಲಿದೆ.ಒಂದು ವೇಳೆ ಸೋಂಕು ಪತ್ತೆ ಆದರೆ ಅಂತಹ ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ ಎನ್ನುವುದು ಸರ್ಕಾರದ ಉದ್ದೇಶವಾಗಿದೆ.