ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ – ಶ್ರೀಗಳು

ರಾಯಚೂರು.ಅ.೨೭- ತಾಲೂಕಿನ ಉಡುಮಗಲ್, ಖಾನಾಪೂರ, ಆಶಾಪೂರ, ಅರಳಿಬೆಂಚಿ, ಜಾಲಿಬೆಂಚಿ, ದಿನ್ನಿ, ಹಾಗು ಮಂಗಳವಾರಪೇಟೆ ಹಿರೇಮಠ ರಾಯಚೂರು ಶ್ರೀಮಠಗಳ ಪೀಠಾಧಿಪತಿಗಳಾದ ಷ.ಬ್ರ.ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ರಾಜಯೋಗಿ ರಾಚೋಟೇಶ್ವರ ತಾತನವರ ೬೫ನೇ ವರ್ಷದ ಪುಣ್ಯಸ್ಮರಣೆ ನಿನ್ನೆ ಸಂಜೆ ನಡೆಯಿತು.
ಬೆಳಿಗ್ಗೆ ೦೬ ಗಂಟೆಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಶಾಂಭವಿ ಅಮ್ಮನವರ ಮೂರ್ತಿಗೆ ಕುಂಕುಮಾರ್ಚನೆ ಹಾಗೂ ಪುರಾಣ ಮಂಗಲ ಸಂಜೆ ಮುತೈದೆಯರಿಗೆ ಉಡಿ ತುಂಬುವುದು, ದೀಪೋತ್ಸವ, ಅಖಂಡ ಶಿವ ಭಜನೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಿನ್ನೆ ಸಂಜೆ ಹೇಮನೂರಿನ ಬೂದಿ ಬಸವ ಸ್ವಾಮಿಯವರ ಪುರವಂತಿಕೆ, ಸುರೇಶ ಸ್ವಾಮಿ ಮಠಪತಿ ಇವರಿಂದ ೧೦೦೮ ಮಳ ಹಗ್ಗದ ಶಸ್ತ್ರ ಹಾಕಿಸಿಕೊಳ್ಳುವ ಕಾರ್ಯಕ್ರಮಗಳು ಜರುಗಿದವು ನಂತರ ಬೆಳಿಗ್ಗೆ ೦೮ ಗಂಟೆಗೆ ಶಾಂಭವಿ ತಾಯಿಯ ಜಂಭು ಸವಾರಿ ಮತ್ತು ಪಲ್ಲಕ್ಕಿ ಮಹೋತ್ಸವವು ಜರುಗಿತು.
ಶ್ರೀಮಠದ ವತಿಯಿಂದ ೬ ಜನ ಗ್ರಾಮದ ಮಹಿಳೆಯರಿಗೆ ಸನ್ಮಾನಿಸಿ “ಸಾಧನಾ ಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ ಧರ್ಮ ಸಂದೇಶ ನೀಡಿದ ಕುಟುಂಬದಲ್ಲಿ ಮಕ್ಕಳು ಸಂಸ್ಕೃತಿ ಸಂಪ್ರದಾಯದಿಂದ ಬೆಳೆಯಬೇಕಾದರೆ ಮೊದಲು ತಾಯಿಯ ಪಾತ್ರ ಮುಖ್ಯವಾಗುತ್ತದೆ. ಮೊದಲು ಪೋಷಕರು ಸಂಪ್ರದಾಯದಿಂದ ನಡೆಯಬೇಕು. ತಮ್ಮ ಮಕ್ಕಳು ಕೂಡ ಸಂಸ್ಕಾರದಿಂದ ಬೆಳೆಯುತ್ತಾರೆ ಎಂದು ನುಡಿದರು. ಪೋಷಕರು ದಿನ ನಿತ್ಯ ಧಾರಾವಾಹಿ ವೀಕ್ಷಣೆ ಮಾಡಬಾರದು. ಪೋಷಕರ ರೂಡಿಯನ್ನು ಮಕ್ಕಳು ಅನುಸರಿಸುತ್ತಾರೆ ಎಂದರು.
ಆದರೆ ತಾಯಂದಿರು ಮನೆಯಲ್ಲಿ ದೇವರ ಪೂಜೆ, ಭಕ್ತಿಗೀತೆ, ವಚನ, ಜಾನಪದ ಗೀತೆ, ಭಕ್ತಿಯ ಹಾಡುಗಳು ಅಥವಾ ಪುಸ್ತಗಳನ್ನು ಓದುವಂತ ರೂಡಿ ಹಾಕಿಕೊಂಡರೆ ಮಕ್ಕಳಿಗೂ ಸಹಿತ ಅದೇ ಸಂಪ್ರದಾಯ ರೂಡಿಯಾಗುತ್ತದೆ. ತಾಯಿಯನ್ನು ಜಗತ್ತಿನ ಮೊದಲ ಗುರು ಎಂದು ಕರೆಯುತ್ತಾರೆ. ತಾಯಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ತಾಯಿಯ ಜವಾಬ್ದಾರಿ ಎಂದು ನುಡಿದರು. ಬಾಲವಾಗ್ಮಿ ಕು. ಹಾರಿಕಾ ಮಂಜುನಾಥ, ಸರಿಗಮಪ ಖ್ಯಾತಿಯ ಶ್ರೀರಾಮ ಕಾಸರ, ಪ್ರಭಾ ಕಂಬಾರ,ಕನ್ನಡದ ಕೋಗಿಲೆ ಕು. ಮಾನ್ಯಾ,ಹಾಸ್ಯ ಕಲಾವಿದ ದೇವರಾಜ ಯಲಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಶ್ರೀಮಠದ ಸರ್ವ ಸದ್ಭಕ್ತರು, ಗ್ರಾಮದ ಗುರು ಹಿರಿಯರು, ಗಣ್ಯರು, ಜನಪ್ರತಿನಿಧಿಗಳು, ಮುಖಂಡರು, ಯುವಕರು, ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.