ಮಕ್ಕಳಿಗೆ ಸಂಸ್ಕಾರ ಕಲಿಸಿ, ಎಷ್ಟೇ ಎತ್ತರಕ್ಕೆ ಹೋದರೂ ಅಹಂಕಾರ ಪಡಬೇಡಿ

ದಾವಣಗೆರೆ.ಜೂ.೪: ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತೇವೆ, ದೇವರಿಗೆ ನಮಸ್ಕರಿಸುತ್ತೇವೆ. ದೇವರು ವರ ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಮನೆಯಲ್ಲಿ ಕಷ್ಟ ಇದ್ದರೂ ಎಲ್ಲವನ್ನೂ ಕೊಡುವ ತಂದೆ ತಾಯಿಯೇ ನಿಜವಾದ ದೇವರು. ಹಾಗಾಗಿ ಪ್ರತಿಯೊಬ್ಬ ಮಕ್ಕಳು ಸಂಸ್ಕಾರ ರೂಢಿಸಿಕೊಳ್ಳಬೇಕು. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದು ಉದ್ಯಮಿ ಬಿ. ಸಿ. ಉಮಾಪತಿ‌ ಕರೆ ನೀಡಿದರು. ನಗರದ ಎವಿಕೆ ಕಾಲೇಜಿನ ಜಿಲ್ಲಾ ಗುರುಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ದಾವಣಗೆರೆ ದಕ್ಷಿಣ ವಲಯ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು‌.ಯಾವುದೇ ಜಾತಿ, ಧರ್ಮ ಇದ್ದರೂ ಸಂಸ್ಕೃತಿ, ಸಂಸ್ಕಾರ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇದೆ. ಪ್ರತಿಯೊಬ್ಬರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಮೊದಲೆಲ್ಲಾ ಕೃಷಿಕರ ಮಕ್ಕಳು ರೈತರಾಗಿ, ಕೂಲಿ ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿ ಆಯಾ ವೃತ್ತಿಗೆ ತಕ್ಕಂತೆ ಬದುಕುತ್ತಿದ್ದರು. ಈಗ ಕಾಲಘಟ್ಟ ಬದಲಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದೇ ಜೀವನದಲ್ಲಿ ಪ್ರಮುಖವಾಗಿರುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸವನ್ನು ಎಷ್ಟೇ ಕಷ್ಟವಿದ್ದರೂ ಕೊಡಿಸುತ್ತಾರೆ ಎಂದು ಹೇಳಿದರು.ಇಂದಿನ ದಿನಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೆಲಸ ಆಗಲೇಬೇಕಿದೆ. ಎಷ್ಟೇ ಉನ್ನತ ಮಟ್ಟಕ್ಕೆ ಹೋದರೂ ಮಕ್ಕಳು ತಂದೆ ತಾಯಿ ಮರೆಯಬಾರದು. ಅವರಿಗೆ ಗೌರವ ರೀತಿಯಲ್ಲಿ ಬದುಕಬೇಕು. ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಎಷ್ಟೇ ಕಲಿತರೂ ಕಡಿಮೆ. ಜೀವನದಲ್ಲಿ ತಿಳಿದುಕೊಳ್ಳುವುದು, ಕಲಿಯುವುದು ಬಹಳಷ್ಟಿದೆ. ಉನ್ನತ ಸ್ಥಾನಕ್ಕೆ ಹೋದವರು ಯಾವುದೇ ಕಾರಣಕ್ಕೂ ಅಹಂಕಾರ ಪಡಬಾರದು. ಕಾಯಕವೇ ಕೈಲಾಸ ಎಂಬಂತೆ ದುಡಿಯಿರಿ. ಉತ್ತಮ ಜೀವನ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.ಇನ್ನು ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ದಾವಣಗೆರೆ ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಸಹಾಯಕ ಅಧಿಕಾರಿ ಎಸ್. ಡಿ. ತ್ರಿನೇತ್ರ, ಅನ್ನಪೂರ್ಣಮ್ಮ ಶಾಮನೂರು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇದೇ ವೇಳೆ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎ. ಜೆ. ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಬಿ‌‌. ಎಂ. ದಾರುಕೇಶ್, ಪ್ರಾಧ್ಯಾಪಕ ಮಂಜುನಾಥ್ ಶ್ಯಾಗಲೆ, ಉದ್ಯಮಿ ಶಿವನಹಳ್ಳಿ ರಮೇಶ್ ಮತ್ತಿತರರು ಹಾಜರಿದ್ದರು.