ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯಕ

ಬೀದರ್:ಜು.17: ಆದರ್ಶ ಪ್ರಜೆಗಳಾಗಲು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅವಶ್ಯಕವಾಗಿದೆ ಎಂದು ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಅಭಿಪ್ರಾಯಪಟ್ಟರು.

ನಗರದ ವಿದ್ಯಾನಗರ ಕಾಲೊನಿಯ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕಾರ ಇದ್ದರೇನೆ ವಿದ್ಯೆಗೆ ಬೆಲೆ ಬರುತ್ತದೆ. ಕಾರಣ, ಅಕ್ಷರ ಜ್ಞಾನದ ಜತೆಗೆ ಉತ್ತಮ ಸಂಸ್ಕಾರವನ್ನೂ ಕೊಡುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಶಿಕ್ಷಕ ವೃತ್ತಿ ಬಹಳ ಪವಿತ್ರವಾಗಿದೆ. ಹೀಗಾಗಿ ಶಿಕ್ಷಕರು ವೃತ್ತಿ ಗೌರವ ಕಾಯ್ದುಕೊಂಡು ಹೋಗಬೇಕು. ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಶ್ರಮಿಸಬೇಕು ಎಂದು ಹೇಳಿದರು.

ಮೈಲೂರು ಕ್ಲಸ್ಟರ್ ಸಿಆರ್‍ಪಿ ವಿಜಯಲಕ್ಷ್ಮಿ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಉಪನ್ಯಾಸಕ ರಾಜಕುಮಾರ ಶಿಂಧೆ ಮಾತನಾಡಿ, ಮಕ್ಕಳಿಗೆ ಬುನಾದಿ ಶಿಕ್ಷಣ ಮಾತೃಭಾಷೆಯಲ್ಲೇ ಕೊಡಬೇಕು. ಸಾಧಕರಲ್ಲಿ ಮಾತೃಭಾಷೆಯಲ್ಲಿ ಓದಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಪಠ್ಯಕ್ರಮದೊಂದಿಗೆ ಜೀವನ ಮೌಲ್ಯಗಳನ್ನೂ ಹೇಳಿಕೊಡಲಾಗುತ್ತಿದೆ. ಮಕ್ಕಳನ್ನು ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಎದುರಿಸಲು ಅಣಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

9ನೇ ತರಗತಿ ವಿದ್ಯಾರ್ಥಿಗಳು 8ನೇ ತರಗತಿ ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಪ್ರೌಢಶಾಲೆ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಬಂಬಳಗೆ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವಾಸುದೇವ್ ರಾಠೋಡ್, ನಾಗರತ್ನ ಜಮಾದಾರ್, ಅನಿಲಕುಮಾರ ಟೆಕೋಳೆ, ರಾಜಕುಮಾರ ಬಿ. ಗಾದಗೆ, ಆನಂದ ಕೆ. ಜಾಧವ್, ಎಸ್.ಬಿ. ಪಾಟೀಲ ಇದ್ದರು.

ಪ್ರಶಿಕ್ಷಣಾರ್ಥಿ ನೀಲಾಂಬಿಕಾ ಸ್ವಾಗತಿಸಿದರು. ವೈಷ್ಣವಿ ನಿರೂಪಿಸಿದರು. ನೇಹಾ ಭಂಡಾರಿ ವಂದಿಸಿದರು.