ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡುವುದು ಹೆತ್ತವರ ಕರ್ತವ್ಯ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.24: ಮಕ್ಕಳಿಗೆ ತಂದೆ ತಾಯಿ ಶಿಕ್ಷಣ ಕಲಿಸುವುದರ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು, ನೂತನ ದಂಪತಿಗಳು ಆದರ್ಶ ಜೀವನವನ್ನು ಕೈಗೊಂಡು ಸಮಾಜ ಮೆಚ್ಚುವಂತೆ ಬದುಕನ್ನು ಸಾಗಿಸಬೇಕೆಂದು ಬೆಂಗಳೂರಿನ ವಿಭೂತಿಪುರ ಮಠದ ಮಹಾಂತಲಿಂಗ ಶಿವಾಚಾರ್ಯರು ತಿಳಿಸಿದರು.
ಪಟ್ಟಣದ ಚಾನುಕೋಟಿಮಠದಲ್ಲಿ ಬಸವಜಯಂತಿ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹಗಳು ಹಾಗೂ ಶಿವದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿ, ಆಡಂಬರದ ಮದುವೆಗಳಿಗೆ ಕಡಿವಾಣ ಹಾಕಿ ಸರಳವಾಗಿ ಮಾಡುವುದರಿಂದ ಆರ್ಥಿಕವಾಗಿ ಸಧೃಢಗೊಳ್ಳಲು ಸಹಕಾರಿಯಾಗುತ್ತದೆ ಎಂದರು. ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿ ಧಾರ್ಮಿಕ ಕಟ್ಟುಪಾಡುಗಳ ಜೊತೆ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿಸುವ ಹೊಣೆ ಹೆತ್ತವರದ್ದು ಎಂದರು.
ಹಿರೇಹಡಗಲಿ ಮಠದ ಹಾಲವೀರಪ್ಪಜ್ಜ ಸ್ವಾಮೀಜಿ ಮಾತನಾಡಿ ಮೂರು ದಶಕಗಳಿಂದ ಚಾನುಕೋಟಿ ಮಠಾಧೀಶರಾದ ಸಿದ್ಧಲಿಂಗ ಶಿವಾಚಾರ್ಯರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿಯಾಗಿ ಸೇವೆಸಲ್ಲಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದ ವಿಷಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಾನುಕೋಟಿ ಮಠಾಧೀಶರಾದ ಸಿದ್ದಲಿಂಗಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ದಿನಗಳಿಂದ ಪುರಾಣ ಪ್ರವಚನ, 6 ಜೋಡಿಗಳ ವಿವಾಹ, 46 ವಟುಗಳಿಗೆ ಶಿವದೀಕ್ಷೆ ಹಾಗೂ ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಗೊಳ್ಳಲು ಮಠದ ಕಾರ್ಯಕರ್ತರು ಹಾಗೂ ಭಕ್ತರ ಸಹಕಾರದಿಂದ ಸಾಧ್ಯವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ನಂದಿಪುರ ಮಠದ ಮಹೇಶ್ವರ ಶಿವಾಚಾರ್ಯರು, ಬೆಣ್ಣೆಹಳ್ಳಿಮಠದ ಪಂಚಾಕ್ಷರಿ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಆಶೀರ್ವಚನ ನೀಡಿದರು.

One attachment • Scanned by Gmail