ಮಕ್ಕಳಿಗೆ ಶಿಕ್ಷಣ,ಸಂಸ್ಕಾರ ಕಲಿಸಿ-ನಂಜೇಗೌಡ

ವಿಜಯಪುರ.ನ೪:ಇಂದು ಶೈಕ್ಷಣಿಕ ಕ್ಷೇತ್ರ ಸಾಕಷ್ಟು ಮುಂದುವರೆದಿದೆ. ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ನೀಡುವುದು ಸಹ ಅಗತ್ಯವಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ತಿಳಿಸಿದರು.
ಪಟ್ಟಣದ ಎವರ್ ಗ್ರೀನ್ ಶಾಲೆಯ ಮುಂಭಾಗದಲ್ಲಿರುವ ಕಲಾವಿದ ರಮೇಶ್‌ರವರ ನಿವಾಸದಲ್ಲಿ ತಾಲೂಕು ಕನ್ನಡ ಕಲಾವಿದರ ಸಂಘದವತಿಯಿಂದ ಆಯೋಜಿಸಿದ್ದ ೭೧ನೇ ಕನ್ನಡ ದೀಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜಗತ್ತಿನ ಸಂಪರ್ಕ, ಭರಾಟೆ ಅಧಿಕಗೊಳ್ಳುತ್ತಿದ್ದಂತೆ ನಾವು ಕನ್ನಡ ನಮ್ಮ ಭಾಷೆ ಎನ್ನುವುದನ್ನು ಮರೆತುಬಿಟ್ಟಿದ್ದೇವೆ. ಕನ್ನಡ ಭಾಷೆಯನ್ನು, ಕನ್ನಡ ಸಾಹಿತ್ಯವನ್ನುಕಡೆಗಣಿಸುತ್ತಿದ್ದೇವೆ. ಬದುಕಿಗೆ ಇಂಗ್ಲಿಷ್ ಭಾಷೆ ಅಗತ್ಯ ಎನ್ನವುದು ಸತ್ಯ. ಆದರೆ ಅದರಿಂದ ನಮ್ಮ ಭಾಷಾ ಸಂಸ್ಕೃತಿಯನ್ನು ನಾವು ತೊರೆಯಬೇಕು ಎನ್ನುವುದು ನಾವು ಸೃಷ್ಟಿಸಿಕೊಂಡಿದ್ದು. ಆ ದಿಶೆಯಲ್ಲಿ ಬಹುದೂರ ಹೆಜ್ಜೆಯನ್ನೂ ಹಾಕಿದ್ದೇವೆ. ನಮ್ಮ ಈ ಕಾರ್ಯ ಎಷ್ಟು ಸರಿಎಂದು ನಾವು ಚಿಂತಿಸಲೇ ಬೇಕು.ನಮ್ಮ ಮಾತೃ ನುಡಿಯರಕ್ಷಣೆ, ಅದರ ಮೌಲ್ಯಗಳ ರಕ್ಷಣೆ ನಮ್ಮಜವಾಬ್ದಾರಿ.ನಮ್ಮನ್ನು ನಾವೇ ಮರೆತರೆ, ಕಡೆಗಾಣಿಸಿದರೆ ಅದನ್ನು ಗೌರವಿಸುವವರು ಯಾರು ಎಂದರು.
ಕನ್ನಡ ಕಲಾವಿದರ ಸಂಘ ಅಧ್ಯಕ್ಷ ಮೋಹನ್ ಬಾಬು ಮಾತನಾಡಿ, ಇಂದು ದೂರವಾಗುತ್ತಿರುವುದು ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿ.ಸಂಸ್ಕೃತಿ-ಸಂಪ್ರದಾಯಗಳು ನಮ್ಮಜೀವನ ಶೈಲಿಯೊಂದಿಗೆ ಬೆರೆತುಕೊಂಡು ಬಂದಿರುವಂತಹವು. ಅವು ನಮ್ಮನ್ನು ಬಹುಬೇಗ ಬಿಟ್ಟು ಹೋಗಲಾರವು!ಆದರೆ ಭಾಷೆಎನ್ನುವುದು ಹಾಗಲ್ಲ.ಅದು ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬಹುಬೇಗ ನಮ್ಮನ್ನು ರೂಪಾಂತರಗೊಳಿಸುತ್ತದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಕರ್ ಹಡಪದ್ ಮಾತನಾಡಿ, ಪೋಷಕರು ಬಾಲ್ಯಾವಸ್ಥೆಯಲ್ಲೇ ದೇಶ ಹಾಗೂ ಭಾಷೆಯ ಪ್ರೇಮ ಮಕ್ಕಳಲ್ಲಿ ತುಂಬಿದರೆ ಮುಂದಿನ ದಿನಗಳಲ್ಲಿ ಅವರಿಗೆ ದೇಶಕ್ಕಾಗಿ ಹಾಗೂ ಭಾಷೆಗಾಗಿ ಸೇವೆ ಮಾಡಬೇಕು ಎಂಬ ಭಾವನೆ ಮೂಡುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಂಪಣ್ಣ, ವಿ.ಸೀತಾರಾಮಯ್ಯ, ವಿ.ಎನ್.ರಮೇಶ್, ಜಿ.ಆರ್.ಮುನೀವಿರಣ್ಣ, ಸುಬ್ರಮಣಿ, ಗೋವಿಂದರಾಜು, ಮಂಜುನಾಥ್, ಎಂ.ವಿ.ನಾಯ್ಡು ಇತರರು ಹಾಜರಿದ್ದರು.