ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ: ಸುರೇಂದ್ರಬಾಬು

ಜಿಲ್ಲಾಡಳಿತದಿಂದ ಸಂತಕವಿ ಸರ್ವಜ್ಞ ಜಯಂತಿ ಆಚರಣೆ
ರಾಯಚೂರು,ಫೆ.೨೦- ಸಮಾಜದ ಮಕ್ಕಳಿಗೆ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಬೇಕು, ಆಗ ಮಾತ್ರ ಸಮಾಜ ಅಭಿವರದ್ಧಿ ಹೊಂದಲು ಸಾಧ್ಯವೆಂದು ಯರಮರಸ್ ಡಿ.ಪಿ.ಇ.ಡಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಾಯಿ ಸುರೇಂದ್ರಬಾಬು ಅವರು ಹೇಳಿದರು.
ಅವರು ಫೆ.೨೦ರ(ಸೋಮವಾರ) ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಉಪನ್ಯಾಸ ನೀಡಿದರು.
ಕುಂಬಾರ ಸಮಾಜದ ಜನರು ಸರ್ಕಾರದಿಂದ ನೀಡಲಾದ ವಿವಿಧ ಸೌಲಭ್ಯಗಳನ್ನು ಪಡೆಯುವ ಮೂಲಕ ಅಭಿವೃದ್ಧಿ ಹೊಂದಬೇಕು ಸರ್ಕಾರ ಈಗಾಗಲೇ ಕುಂಬಾರರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವುದಾಗಿ ಭರವಸೆ ನೀಡಿದ್ದು, ಸಮಾಜದ ಜನರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನಿಡಬೇಕು ಎಂದು ಹೇಳಿದರು.
ಸರ್ವಜ್ಞ ಕವಿ ಒಬ್ಬ ಶ್ರೇಷ್ಠ ಕವಿಯಾಗಿದ್ದು, ಸರ್ವರನ್ನು ಬಲ್ಲವರಾಗಿದ್ದರು. ತಮ್ಮ ವಚನಗಳ ಮೂಲಕ ಜನರಿಗೆ ಒಳ್ಳೆಯ ಮಾರ್ಗವನ್ನು ಹಾಕಿಕೊಟ್ಟವರಾಗಿದ್ದರು. ಸರ್ವಜ್ಞ ಕವಿ ೭೦೭೦ ವಚನಗಳನ್ನು ಬರೆದಿದ್ದು, ಸಮಾಜದಲ್ಲಿ ಸ್ವಾರ್ಥಿಗಳಾಗಬಾರದು ಉಪಕಾರಿಗಳಾಗಬೇಕು ಎಂದು ಸಮಾಜಕ್ಕೆ ಸಂದೇಶವನ್ನು ನೀಡಿ ಜಗತ್ತಿನ ಇತಿಹಾಸದಲ್ಲಿ ಅಜರಾಮರವಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಕುಂಬಾರ ಸಮಾಜದ ಮುಖಂಡರಾದ ಶಿವರಾಜ ಕುಂಬಾರ, ವೀರಭದ್ರಪ್ಪ, ಮಲ್ಲಿಕಾರ್ಜುನ, ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸರ್ವಜ್ಞರ ಭಾವಚಿತ್ರ ಮೆರವಣಿಗೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞ ಜಯಂತಿ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಿಂದ ನಗರದ ಕನ್ನಡ ಭವನದವರೆಗೆ ಸಂತಕವಿ ಸರ್ವಜ್ಞರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಅವರು ಪೂಜೆ ನೆರವೇರಿಸಿದರು. ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.