ಮಕ್ಕಳಿಗೆ ವೃತ್ತಿ‌ಶಿಕ್ಷಣದ ಅರಿವು ಮೂಡಿಸಲು ಪ್ರಯತ್ನಿಸಿ

ಸಂಜೆವಾಣಿ ವಾರ್ತೆ
ಹರಪನಹಳ್ಳಿ ಸೆ 06 : ಶಿಕ್ಷಕರು ಪ್ರೀತಿ, ವಿಶ್ವಾಸ‌ ಮತ್ತು ಸಂಯಮದ ಸಂಕೇತ. ವಿದ್ಯಾರ್ಥಿಗಳಿಗೆ ಮಾದರಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಗೆ ವೃತ್ತಿ‌ಶಿಕ್ಷಣದ ಬಗ್ಗೆ ಜ್ಞಾನ ‌ಮೂಡಿಸಬೇಕು ಎಂದು ಡಿವೈಎಸ್‌ಪಿ ವಿ.ಎಸ್‌. ಹಾಲಮೂರ್ತಿ ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ತೆಗ್ಗಿನಮಠ ಚಂದ್ರಶೇಖರಸ್ವಾಮಿ ಧರ್ಮ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.
ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯ, ಶಿಸ್ತಿಗೆ ಆದ್ಯತೆ ನೀಡಲಾಗಿತ್ತು. ಆಧುನಿಕ ಶಿಕ್ಷಣ ಪದ್ಧತಿಯು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟಿದ್ದು, ನೈತಿಕ ಮೌಲ್ಯ, ಶಿಸ್ತು ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬಸವರಾಜ ಸಂಗಪ್ಪನವರ್ ಮಾತನಾಡಿ, ವಿಜಯನಗರ ಜಿಲ್ಲೆಯಲ್ಲಿ ಹರಪನಹಳ್ಳಿಗೆ ಡಯಟ್ ಶಿಕ್ಷಣ ತರಬೇತಿ ಕೇಂದ್ರ ಕೊಡಬೇಕು. ಸಮನ್ವಯಾಧಿಕಾರಿ ಕಟ್ಟಡ ನವೀಕರಿಸಬೇಕು. ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ನಿವೇಶನ ನೀಡಬೇಕು ಎಂದು ಆಗ್ರಹಿಸಿದರು. ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತಕರ್ ಇದ್ದರು.