
ಕೋಲಾರ,ನ,೧೧-ಸರ್ಕಾರಿ ಶಾಲಾ ಮಕ್ಕಳಿಗೆ ವಿಶ್ವದ ಸಮಗ್ರ ಅಭಿವೃದ್ದಿಗೆ ಕಾರಣವಾದ ವಿಜ್ಞಾನ ಕಲಿಕೆಯನ್ನು ಸುಲಭವಾಗಿಸುವ ಪ್ರಯತ್ನವನ್ನು ನಿರಂತರವಾಗಿ,ನಿಸ್ವಾರ್ಥವಾಗಿ ನಡೆಸಿಕೊಂಡು ಬಂದಿರುವ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾದುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಕನ್ನಯ್ಯ ಅಭಿಪ್ರಾಯಪಟ್ಟರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್, ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ‘ವಾಕೋವಾಕ್ಯಂ’ ಘೋಷವಾಕ್ಯದೊಂದಿಗೆ ನಡೆದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಮೂಲಕ ಶಾಲೆಗಳಲ್ಲಿ ವಿಜ್ಞಾನವನ್ನು ಪ್ರಾಯೋಗಗಳೊಂದಿಗೆ ಕಲಿಸುವ ಪ್ರಯತ್ನವಾಗಿದೆ, ಸರ್ಕಾರಿ ಶಾಲಾ ಮಕ್ಕಳಲ್ಲಿ ಪ್ರಶ್ನಿಸುವ, ತರ್ಕ ಮಾಡುವ ಶಕ್ತಿಯನ್ನು ಈ ಸಂಸ್ಥೆ ನೀಡಿದ್ದು, ವಿಜ್ಞಾನವನ್ನು ಅನುಭವದ ಕಲಿಕೆಯಾಗಿಸಿದೆ ಮತ್ತು ಕಟ್ಟಕಡೆಯ ಹಳ್ಳಿಗೂ ತನ್ನ ಸೇವೆಯನ್ನು ವಿಸ್ತರಿಸಿರುವ ಸಂಸ್ಥೆ ಇದು ಎಂದು ಶ್ಲಾಘಿಸಿದರು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವವನ್ನು ಬಲಗೊಳಿಸುವ ಪ್ರಯತ್ನ ಇದಾಗಿದೆ, ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಅತಿ ಮುಖ್ಯ ಎಂದ ಅವರು, ವಿದ್ಯಾರ್ಥಿಗಳು ಶ್ರದ್ಧೆ,ನಿರಂತರ ಪರಿಶ್ರಮದಿಂದ ಸಾಧನೆ ಮಾಡಿ ಎಂದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದದ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಿ.ಕೆ.ರಾವ್ ಮಾತನಾಡಿ, ವಾಕೋವಾಕ್ಯಂ ಭಾರತದ ಸಂಸ್ಕೃತಿಯಾಗಿದೆ, ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಅತಿ ಮುಖ್ಯ ಎಂದರು.
ಟೀಕೆಗಳನ್ನು ಮೆಟ್ಟಿ ಸಾಧನೆಯತ್ತ ಸಾಗುವುದರ ಕುರಿತು ಆಲೋಚಿಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದ ಅವರು, ನಮ್ಮ ಸಂಸ್ಥೆ ವಿಜ್ಞಾನವನ್ನು ಚಟುವಟಿಕೆಯಾಧಾರಿತವಾಗಿ ಕಲಿಸುವ ಪ್ರಯತ್ನ ಮಾಡಿದ್ದು, ಇದರಿಂದ ವಿಜ್ಞಾನ ಕಲಿಕೆ ಸುಲಭವಾಗಿದೆ ಎಂದರು.
ಪ್ರತಿಷ್ಠಾನದ ಜನರಲ್ ಮ್ಯಾನೇಜರ್ ಎ.ಆರ್.ನಾಗೇಶ್ ಮಾತನಾಡಿ,ಓದುವ ಮೂಲಕ, ಕೇಳುವ ಮೂಲಕ ಕಲಿಕೆ ಇದೆ ಆದರೆ ಅನುಭವದ ಮೂಲಕ ಕಲಿಯುವುದು ಅದ್ಬುತವಾದುದು ಮತ್ತು ಶಾಶ್ವತವಾಗಿ ಉಳಿಯುವಂತದ್ದು ಎಂದು ತಿಳಿಸಿದರು.
ವಸ್ತುಸ್ಥಿತಿ, ನೈಜಸ್ಥಿತಿ ಅರಿತು ಪ್ರಶ್ನಿಸುವ ಮನೋಭಾವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಮ್ಮ ಫೌಂಡೇಷನ್ ಕೆಲಸ ಮಾಡುತ್ತಿದೆ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಇದೀಗ ಅನುಭವದ ಮೂಲಕ ಕಲಿಕೆ ಎಂದು ಈಗ ಹೇಳಲಾಗಿದೆ ಆದರೆ ೧೯೯೯ರಲ್ಲಿ ಸ್ಥಾಪನೆಯಾದ ನಮ್ಮ ಸಂಸ್ಥೆ ೨೫ ವರ್ಷಗಳ ಹಿಂದೆಯೇ ಈ ಧ್ಯೇಯವನ್ನು ಅಳವಡಿಸಿಕೊಂಡಿದೆ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ೫೦ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಗಸ್ತ್ಯ ಫೌಂಡೇಷನ್‌ನ ಹರೀಶ್ ಮತ್ತು ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.