ಮಕ್ಕಳಿಗೆ ಲೈಂಗಿಕ ಕಿರುಕುಳ ಸರ್ಕಾರಿ ಕಿರಿಯ ಇಂಜಿನಿಯರ್ ಸೆರೆ

ನವದೆಹಲಿ,ನ.17- ಸುಮಾರು 50 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಉತ್ತರ ಪ್ರದೇಶ ಸರ್ಕಾರಿ ಜೂನಿಯರ್ ಇಂಜಿನಿಯರ್ ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಇಂಜಿನಿಯರ್ ಐದರಿಂದ 16 ವರ್ಷದೊಳಗಿನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದು ಕಳೆದ 10 ವರ್ಷಗಳಿಂದ ಆರೋಪಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಸ್ಫೋಟಕ ವಿಷಯವನ್ನು ತನಿಖಾಧಿಕಾರಿಗಳು ಬಹಿರಂಗಗೊಳಿಸಿದ್ದಾರೆ.
ಚಿತ್ರಕೂಟ, ಬಾಂದಾ ಮತ್ತು ಹಮಿರ್ಪುರ ಜಿಲ್ಲೆಯ ಮಕ್ಕಳು ಆರೋಪಿಯಿಂದ ಕಿರುಕುಳಕ್ಕೆ ಒಳಗಾಗಿದ್ದಾರೆ. ಮಕ್ಕಳ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಅವರಿಗೆ ಎಲೆಕ್ಟ್ರಾನಿಕ್ ಡಿವೈಸ್, ಮೊಬೈಲ್ ಕೊಡಿಸಿ ವಿಷಯ ಹೊರಗೆ ಬರದಂತೆ ನೋಡಿಕೊಳ್ಳುತ್ತಿದ್ದನು.
ಸೆಕ್ಸ್ ಟಾಯ್, ನಗದು ವಶ: ಬಂಧನದ ವೇಳೆ ಅಧಿಕಾರಿಗಳು ಆರೋಪಿ ಬಳಿಯಲ್ಲಿದ್ದ ಎಂಟು ಮೊಬೈಲ್ ಫೋನ್, ಸೆಕ್ಸ್ ಟಾಯ್, ಮಕ್ಕಳ ಲೈಂಗಿಕ ಶೋಷಣೆಗೆ ಬಳಸಲಾಗುವ ಸಾಧನಗಳು, ಅಂದಾಜು ಎಂಟು ಲಕ್ಷ ರೂ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬಾಂದಾ ಜಿಲ್ಲೆಯಲ್ಲಿ ಬಂಧಿಸಲಾಗಿದ್ದು, ಆತನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಕೇಳಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಆರೋಪಿ 100ಕ್ಕೂ ಅಧಿಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವರದಿ ಆಗಿದೆ. ವಿಚಾರಣೆ ವೇಳೆ ಮಕ್ಕಳಿಗೆ ಮೊಬೈಲ್ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಮಕ್ಕಳ ವೀಡಿಯೋ, ಫೋಟೋಗ್ರಾಫ್ ಗಳನ್ನು ಆನ್‍ಲೈನ್ ನಲ್ಲಿ ಮಾರಾಟ ಮಾಡುತ್ತಿದ್ದನು.
ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತಿನಿತ್ಯ 100ಕ್ಕೂ ಅಧಿಕ ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಜನವರಿಯಲ್ಲಿ ವರದಿ ನೀಡಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಶೇ.22ರಷ್ಟು ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.