
ಪಾವಗಡ, ಆ. ೧೨- ಮಕ್ಕಳಿಗೆ ಸಕಾಲಕ್ಕೆ ಲಸಿಕೆ ಹಾಕಿಸುವ ಮೂಲಕ ಮಾರಾಣಾಂತಿಕ ಕಾಯಿಲೆಯಿಂದ ಅಂಗವಿಕಲರಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ತಹಶೀಲ್ದಾರ್ ಡಿ.ಎನ್. ವರದರಾಜು ಹೇಳಿದರು.
ಪಟ್ಟಣದ ಆಫ್ ಬಂಡೆ ಸಮೀಪದ ಗುಡಿಸಿಲುಗಳಲ್ಲಿರುವಂತಹ ಮಕ್ಕಳಿಗೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಇಂದ್ರಧನುಷ್ ೫.೦ ಅಭಿಯಾನಕ್ಕೆ ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ಹಾಕಿಸುವುದು ಮತ್ತು ಅವರಿಗೆ ಸರಿಯಾದ ಪೌಷ್ಟಿಕಾಂಶಭರಿತ ಆಹಾರ ನೀಡುವುದರ ಜತೆಗೆ ಮಕ್ಕಳನ್ನು ಆರೋಗ್ಯವಂತರಾಗಿಸುವುದು ನಿಮ್ಮ ನಮ್ಮೆಲ್ಲರ ಜವಾಬ್ದಾರಿ. ಇದಕ್ಕೆ ಪ್ರತಿಯೊಬ್ಬರು ಸಹಕರಿಸಿ ನಿಮ್ಮ ಮಕ್ಕಳಿಗೆ ಸಂಪೂರ್ಣ ಲಸಿಕೆ ಕೊಡಿಸುವ ಮೂಲಕ ರೋಗಗಳಿಂದ ದೂರವಿಡಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ತಿರುಪತಿಯ್ಯ ಮಾತನಾಡಿ, ಕಾರ್ಯಕ್ರಮವು ಸೆಪ್ಟೆಂಬರ್ ೧೧, ೧೬ರಂದು, ಅಕ್ಟೋಬರ್ ೯, ೧೧ರಂದು ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಉಚಿತ ಲಸಿಕೆ ನೀಡಲಾಗುವುದು. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಕಚೇರಿಯ ಮೇಲ್ವಿಚಾರಕಿ ಸುಧಾ, ಪ್ರಭಾಮಣಿ ಅನಿತಾ, ಅನಿಲ್‌ಕುಮಾರ್, ಆರೋಗ್ಯಾಧಿಕಾರಿ ಸುರೇಶ್, ಕಂದಾಯ ಅಧಿಕಾರಿ ರಾಜಗೋಪಾಲ್, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.