ಮಕ್ಕಳಿಗೆ ಲಸಿಕೆ ಬಿಬಿಎಂಪಿ ಸಿದ್ಧತೆ

ಬೆಂಗಳೂರು, ಅ.೧೩- ಸಂಭಾವ್ಯ ಕೋವಿಡ್ ಮೂರನೇ ಅಲೆ ಹಿನ್ನೆಲೆ ಶೀಘ್ರದಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ೧೨ರಿಂದ ೧೭ ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ.
ನಗರದಲ್ಲಿಂದು ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಮಕ್ಕಳಿಗೆ ಲಸಿಕೆ ನೀಡುವ ಸಂಬಂಧ ಮೊದಲನೇ ಹಂತದಲ್ಲಿ ೧೨ರಿಂದ ೧೭ ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು.ಇದಕ್ಕಾಗಿ, ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಎರಡನೇ ಹಂತದಲ್ಲಿ ೧೨ಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುವುದು.ಲಸಿಕೆ ಕಡ್ಡಾಯ ಎಂಬಾ ಕಾನೂನು ಎಲ್ಲಿಯೂ ಇಲ್ಲ.ಹೀಗಾಗಿ, ನಾವೂ ಯಾರನ್ನೂ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದು ನುಡಿದರು.
ವಯಸ್ಕರರಿಗೆ ಲಸಿಕೆ ನೀಡುವ ಪ್ರಕ್ರಿಯೂ ಚಾಲ್ತಿಯಲ್ಲಿದ್ದು, ಯಾರು ಲಸಿಕೆ ಪಡೆದಿಲ್ಲವೂ ಅವರನ್ನು ಸ್ವಯಂ ಸೇವಾ ಸಂಘಟನೆ, ಸರ್ಕಾರೇತರ ಸಂಸ್ಥೆಗಳ ಮೂಲಕ ಸಂಪರ್ಕಿಸಿ ಲಸಿಕೆ ನೀಡಲಾಗುವುದು ಎಂದು ಗುಪ್ತ ಹೇಳಿದರು.
ಸದ್ಯ ಹೊಸದಾಗಿ ಲಸಿಕೆ ಪಡೆಯುವ ಮಕ್ಕಳ ಸಂಖ್ಯೆ ನಗರದಲ್ಲಿ ಎಷ್ಟಿದೆ ಎಂಬುವುದರ ಬಗ್ಗೆಯೂ ಸಮೀಕ್ಷೆ, ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.ಎಲ್ಲಿಯೂ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.