ಮಕ್ಕಳಿಗೆ, ಯುವಕರಿಗೆ ಸಂಸ್ಕಾರದ ಅಗತ್ಯತೆ ಇದೆ

ನರೇಗಲ್ಲ,ಮಾ 15: ಇಂದಿನ ಮಕ್ಕಳಿಗೆ ಮತ್ತು ಯುವಕರಿಗೆ ಸಂಸ್ಕಾರದ ಅಗತ್ಯತೆ ಬಹಳಷ್ಟಿದೆ. ಹಿರಿಯರನ್ನು ಗೌರವಿಸುವ, ಅವರೊಂದಿಗೆ ಮಾತನಾಡುವ ಸೌಜನ್ಯತೆಯನ್ನೇ ಇಂದಿನ ಯುವ ಜನಾಂಗ ಕಳೆದುಕೊಂಡಿದೆಯೇನೋ ಎಂಬ ಭಯ ನಮ್ಮೆಲ್ಲರನ್ನು ಕಾಡುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಕ್ಕಳಿಗೆ-ಯುವಕರಿಗೆ ಸಂಸ್ಕಾರದ ಪಾಠ ನೀಡಲು ನಾವು ನೀವೆಲ್ಲರೂ ಕಾಳಜಿ ವಹಿಸಬೇಕು. ಅದಕ್ಕೆ ಹಿರಿಯರಾದ ನಿಮ್ಮೆಲ್ಲರ ಸಹಕಾರ ನಮಗೆ ಬೇಕೆಂದು ಜಗದೀಶ ಸಂಕನಗೌಡ್ರ ಹೇಳಿದರು.
ಪಟ್ಟಣದ ಹಿರೇಮಠ ಶಾಲೆಯ ಸಭಾಭವನದಲ್ಲಿ ನಡೆದ ನಿವೃತ್ತ ಸರಕಾರಿ ನೌಕರರ ಮತ್ತು ಹಿರಿಯ ನಾಗರಿಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಅನೇಕ ಅಹಿತಕರ ಘಟನೆಗಳನ್ನು ನೋಡಿದಾಗ ಶಾಲೆ-ಕಾಲೇಜು ಕಲಿಯಲು, ಕಲಿಸಲು ಬರುತ್ತಿರುವ ನಮ್ಮ ವಿದ್ಯಾರ್ಥಿನಿಯರಿಗೆ ಮತ್ತು ಶಿಕ್ಷಕರಿಗೆ ಯಾವುದೇ ರಕ್ಷಣೆ ಇಲ್ಲವೆಂಬುದು ತಿಳಿಯುತ್ತದೆ.
ಹೀಗಾದರೆ ಮುಂದೊಂದು ದಿನ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕಾದಂತಹ ದುರ್ಘಟನೆಗಳು ನಡೆದಾವು! ಅದಕ್ಕೂ ಮೊದಲೆ ನಾವು ನೀವುಗಳೆಲ್ಲ ಎಚ್ಚೆತ್ತುಕೊಂಡು ಮಕ್ಕಳ-ಯುವಕರ ಮನಸ್ಥಿತಿಯನ್ನು ಬದಲಾಯಿಸುವತ್ತ ದಿಟ್ಟ ಹೆಜ್ಜೆಯನ್ನಿಡಬೇಕಿದೆ. ಅದಕ್ಕೆ ಹಿರಿಯರಾದ ತಾವುಗಳೆಲ್ಲ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ಸಂಕನಗೌಡ್ರ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಹಿರಿಯ ನಾಗರಿಕ ವೇದಿಕೆಯ ಸದಸ್ಯರಿಗೆ ಮನವಿ ಮಾಡಿದರು.
ಶಿವನಗೌಡ ಪಾಟೀಲ ಮಾತನಾಡಿ ಪಟ್ಟಣದ ಅಭಿವೃದ್ಧಿಯಲ್ಲಿಯೂ ನೀವುಗಳು ಕೈ ಜೋಡಿಸಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ನಾವುಗಳು ಈಗಾಗಲೆ ನರೇಗಲ್ಲ ಹಿತ ರಕ್ಷಣಾ ಸಮಿತಿ ಎಂಬ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದು, ಅದರ ಕಾರ್ಯ ಚಟುವಟಿಕೆಗಳಿಗೆ ನಿಮ್ಮ ಸಹಕಾರ, ಮಾರ್ಗದರ್ಶನ ಬೇಕೆಂದರು.
ನಿವೃತ್ತ ಮುಖ್ಯೋಪಾಧ್ಯಾಯ ಸಿ.ವಿ. ವಂಕಲಕುಂಟಿ ಮಾತನಾಡಿ ಪಟ್ಟಣದಲ್ಲಿ ನಡೆಯುವ ಯಾವುದೇ ತರಹದ ಅವ್ಯವಹಾರಗಳನ್ನು ನೋಡಿಕೊಂಡು ಸುಮ್ಮನೆ ಕೂಡ್ರಲು ಆಗುವುದಿಲ್ಲ. ಕಿರಿಯರಿಗೆ ಹಿರಿಯರಾದ ನಾವುಗಳು ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡಬೇಕಾದುದು ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಆರ್. ಕೆ. ಗಚ್ಚಿನಮಠ ಮಾತನಾಡಿ ಇಂದಿನ ಸಭೆಗೆ ಆಗಮಿಸಿರುವ ಇಬ್ಬರೂ ಅತಿಥಿಗಳು ಹೇಳಿದ ಮಾತುಗಳು ಯೋಗ್ಯವಾಗಿವೆ. ನಾವು ಈ ವಿಷಯಗಳನ್ನು ಹೀಗೇ ಬಿಟ್ಟರೆ ನಮ್ಮ ಪಟ್ಟಣದ ಪರಿಸ್ಥಿತಿ ಹದಗೆಟ್ಟು ಹೋಗುತ್ತದೆ. ಅದಕ್ಕೆ ಅವಕಾಶ ಕೊಡದಂತೆ ನಮ್ಮ ಎರಡೂ ಸಂಘಗಳ ವತಿಯಿಂದ ನರೇಗಲ್ಲ ಹಿತರಕ್ಷಣಾ ಸಮಿತಿಗೆ ಅವಶ್ಯವಿರುವ ಎಲ್ಲ ನೆರವನ್ನು ನೀಡಲಾಗುವುದೆಂದರು.
ವೇದಿಕೆಯ ಮೇಲೆ ಡಾ. ಕೆ. ಬಿ. ಧನ್ನೂರ, ಡಿ.ಎ.ಅರವಟಗಿಮಠ ಇನ್ನಿತರರು ಇದ್ದರು. ಸಭೆಯಲ್ಲಿ ಮೂವತ್ತಕ್ಕೂ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು. ಆರ್. ಎಸ್. ಮಠ ಪ್ರಾರ್ಥಿಸಿದರು. ಕಾರ್ಯದರ್ಶಿ ಎಸ್. ಕೆ. ಪಾಟೀಲ ನಿರೂಪಿಸಿದರು. ಜಿ. ಎ. ಬೆಲ್ಲದ ಸ್ವಾಗತಿಸಿದರು. ಮಲಕಸಮುದ್ರಮಠ ವಂದಿಸಿದರು.