ಮಕ್ಕಳಿಗೆ ಮೊಟ್ಟೆ ನೀಡಿಕೆ 40 ಸ್ವಾಮೀಜಿಗಳ ವಿರೋಧ


(ಮುಕುಂದ ಬೆಳಗಲಿ)
ಬೆಂಗಳೂರು ಡಿ.೬: ಮೊಟ್ಟೆ ಮೊದಲಾ? ಅಥವಾ ಕೋಳಿ ಮೊದಲಾ? ಈ ವಾದ – ಪ್ರತಿವಾದ ಶಾಲಾ-ಕಾಲೇಜುಗಳಲ್ಲಿ ಚರ್ಚಾಕೂಟ ವಿಷಯವಾದರೆ ಸ್ನೇಹಿತರ ಗುಂಪಿನಲ್ಲಿ ಹರಟೆಯ ವಸ್ತುವಾಗಿತ್ತು. ಆದರೆ ಈಗ ಇದು ಸರ್ಕಾರದ ಮಟ್ಟದಲ್ಲಿ ಗಂಭೀರವಾಗಿ ಚಿಂತಿಸುವ ವಿಷಯವಾಗಿದೆ.
ಹೌದು ಕಲ್ಯಾಣ ಕರ್ನಾಟಕ ಭಾಗದ ೬ ಹಾಗೂ ವಿಜಯಪುರ ಜಿಲ್ಲೆ ಸೇರಿ ಒಟ್ಟು ೭ ಜಿಲ್ಲೆಗಳ ಶಾಲಾ ಮಕ್ಕಳಲ್ಲಿ ಕಂಡುಬಂದ ಅಪೌಷ್ಟಿಕತೆ, ರಕ್ತಹೀನತೆ ಹಾಗೂ ಬಹು ಪೋಷಕಾಂಶಗಳ ನ್ಯೂನ್ಯತೆ ಅಧಿಕವಾಗಿರುವುದನ್ನು ಸರಿದೂಗಿಸಲು ರಾಜ್ಯ ಸರ್ಕಾರ ಇದೇ ಡಿಸೆಂಬರ್ ೧ರಿಂದ ಜಾರಿಗೆ ತಂದಿರುವ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೊಟ್ಟೆಯನ್ನು ನೀಡುವ ಯೋಜನೆ ಈಗ ವಿವಾದ ಹುಟ್ಟು ಹಾಕಿದೆ. ಈ ಭಾಗದ ನಲವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಇಂದು ಬೆಳಿಗ್ಗೆ ಭಾಲ್ಕಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯೋಜನೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದ್ದು, ಸರ್ಕಾರವನ್ನು ಪೇಚಿಗೆ ಸಿಲುಕಿದ್ದಾರೆ.
ಶಾಲಾ ಮಕ್ಕಳಿಗೆ ಶಾಲೆಯಲ್ಲಿ ಮುಕ್ತವಾಗಿ ಮೊಟ್ಟೆ ವಿತರಿಸುವುದರಿಂದ ಆಹಾರಪದ್ಧತಿಯ ಅರಿವಿಲ್ಲದ ಸಂಪ್ರದಾಯಸ್ಥ ಕುಟುಂಬದ ಮುಗ್ಧ ಮಕ್ಕಳು ಸಹಜವಾಗಿ ಧಾರ್ಮಿಕ ನಂಬಿಕೆಯ ವಿರುದ್ಧವಾಗಿ ಮೊಟ್ಟೆಯನ್ನು ಸೇವಿಸಬಹುದು. ಇದರಿಂದ ಸಂಪ್ರದಾಯ ಕುಟುಂಬದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಬಲವಾಗಿ ವಾದಿಸಿರುವ ಮಠಾಧೀಶರು ಮೊಟ್ಟೆ ಬದಲಾಗಿ ಮೊಳಕೆಕಾಳು ಹಾಗೂ ಇತರೆ ಸತ್ವಯುತ ಸಸ್ಯಾಹಾರವನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಮಠಾಧೀಶರ ಈ ನಡೆಯಿಂದ ಬಸವ ನಾಡು ಬೀದರ ನಲ್ಲಿ ಮುಖ್ಯಮಂತ್ರಿಗಳನ್ನು ಇಂದು ತೀವ್ರ ಇರಿಸುಮುರಿಸಿಗೆ ಸಿಲುಕಿಸಿತು.
ಮೊಟ್ಟೆ ವಿತರಣೆಯಿಂದ ಈ ಭಾಗದ ಲಿಂಗಾಯತ, ಬ್ರಾಹ್ಮಣ ಹಾಗೂ ಜೈನ ಧರ್ಮಿಯರು ಸೇರಿದಂತೆ ಸಸ್ಯಾಹಾರ ಪದ್ಧತಿ ಅನುಸರಿಸುವ ಸಮುದಾಯಗಳ ಭಾವನೆಗಳಿಗೆ ತೀವ್ರ ನೋವಾಗಿದ್ದು, ಆಹಾರ ಪದ್ಧತಿಯಿಂದಾಗಿ ಶಾಲಾ ಮಕ್ಕಳಲ್ಲಿ ಭೇದಭಾವ ಹುಟ್ಟಿಸಿದಂತಾಗುತ್ತದೆ ಹಾಗೂ ದಯವೇ ಧರ್ಮದ ಮೂಲ ಅಹಿಂಸಾ ಪರಮೋಧರ್ಮ ಎಂಬ ತತ್ವ ಸಾರಿದ ಬಸವಣ್ಣನ ಈ ನೆಲದಲ್ಲಿ ಅಪಚಾರವೆಸಗಿದಂತೆ ಆಗಿದೆ ಎಂದು ಮಠಾಧೀಶರು ಬಲವಾಗಿ ವಾದಿಸಿದ್ದಾರೆ.
ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಸರಿದೂಗಿಸಲು ಬಿಸಿಯೂಟದಲ್ಲಿ ಮಾಂಸವನ್ನು ಸಹ ನೀಡಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್ ನೀಡಿರುವ ಹೇಳಿಕೆ ಮಠಾಧೀಶರನ್ನು ಸಹಜವಾಗಿ ಕೆರಳಿಸಿದೆ. ಶಾಲೆಗಳಲ್ಲಿ ಮೊಟ್ಟೆ ವಿತರಿಸುವುದು ಎಂದರೆ ಶಾಲೆಗಳನ್ನು ಮಿಲ್ಟ್ರಿ ಹೋಟೆಲ್‌ಗಳನ್ನಾಗಿ ಮಾಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದ ಚನ್ನಬಸವಾನಂದ ಸ್ವಾಮೀಜಿ, ಯೋಜನೆಯನ್ನು ಹಿಂದಕ್ಕೆ ಪಡೆಯದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.
ಮಠಾಧೀಶರ ವಾದಕ್ಕೆ ವಿರುದ್ಧವಾಗಿ ನಿಲುವು ತಾಳಿರುವ ಇತರೆ ಸಮುದಾಯದ ಕೆಲ ಸಂಘ-ಸಂಸ್ಥೆಗಳು, ಬುದ್ಧಿಜೀವಿಗಳು ಮೊಟ್ಟೆ ವಿತರಣೆ ಯೋಜನೆ ಹಿಂದೆ ಪಡೆದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿವೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಬಹುಸಂಖ್ಯಾತ ಮಕ್ಕಳಿಗೆ ಮೊಟ್ಟೆ ಸೇರಿದಂತೆ ಪೌಷ್ಟಿಕಾಂಶ ಹೊಂದಿರುವ ಮಾಂಸಾಹಾರ ನೀಡುವುದರಲ್ಲಿ ತಪ್ಪೇನಿಲ್ಲ. ಕೆಲ ಸಮುದಾಯಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಈ ಯೋಜನೆಯನ್ನು ವಾಪಸ್ ಪಡೆದರೆ ನ್ಯಾಯಾಲಯದ ಮೆಟ್ಟಿಲೇರುವುದಾಗಿ ದ್ವಾರಕನಾಥ್ ಎಚ್ಚರಿಸಿದ್ದರು.
ಯೋಜನೆಗೆ ವಿರುದ್ಧವಾಗಿ ಮಠಾಧೀಶರು ಸಹ ನ್ಯಾಯಾಲಯದ ಕದ ತಟ್ಟಲು ಸಜ್ಜಾಗಿದ್ದಾರೆ. ೨೦೦೭ ರಲ್ಲಿ ಕುಮಾರಸ್ವಾಮಿ ಸರ್ಕಾರ ಇಂತಹದೇ ಯೋಜನೆಯನ್ನು ಜಾರಿಗೆ ತಂದು, ವಿರೋಧ ತೀವ್ರವಾಗುತ್ತಿದ್ದಂತೆ ಮತ್ತೆ ವಾಪಸು ಪಡೆದಿತ್ತು.
ಏನಿದು ಯೋಜನೆ : ಕಲ್ಯಾಣ ಕರ್ನಾಟಕದ ಬೀದರ್, ರಾಯಚೂರು, ಕಲಬುರ್ಗಿ, ಯಾದಗಿರಿ,ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆ ಮತ್ತು ವಿಜಯಪುರ ಜಿಲ್ಲೆಯಲ್ಲಿನ ೬ ರಿಂದ ೧೫ ವಯೋಮಾನದ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ರಕ್ತಹೀನತೆ ಹಾಗೂ ಬಹು ಪೋಷಕಾಂಶಗಳ ನ್ಯೂನ್ಯತೆ ಅಧಿಕವಾಗಿರುವುದು ಅಧ್ಯಯನದಿಂದ ಕಂಡುಬಂದಿತ್ತು. ಆದ್ದರಿಂದ ಈ ಭಾಗದ ೧ರಿಂದ ೮ನೇ ತರಗತಿಯ ಒಟ್ಟು ೧೪,೪೪,೩೨೨ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ದೊಂದಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೆ ೧೨ ಮೊಟ್ಟೆ ನೀಡಲು ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಕಳೆದ ಡಿಸೆಂಬರ್ ೧ರಿಂದ ಜಾರಿಗೆ ತಂದಿತ್ತು.
ಯೋಜನೆ ಡಿಸೆಂಬರ್ ೧ ರಿಂದ ಮಾರ್ಚ್ ೩೦ರವರೆಗೆ ಜಾರಿಯಲ್ಲಿರಲಿದೆ.