ಮಕ್ಕಳಿಗೆ ಭಾರತೀಯ ಸಂಸ್ಕೃತಿ ಕಲಿಸಬೇಕಾಗಿದೆ: ಎಲ್‌ಹೆಚ್‌ಎ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.5;: ಇಂದಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಆದರ್ಶ ಗುಣಗಳನ್ನು ಬೆಳೆಸುವ ಮೂಲಕ ಅವರನ್ನು ಸಮಾಜದ ಉತ್ತಮ ಆಸ್ತಿಯನ್ನಾಗಿ ಮಾಡಬೇಕಾಗಿದೆ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್‌ಕುಮಾರ್ ಕರೆ ನೀಡಿದರು.ನಗರದ ಮಾಂಟೆಸೋರಿ ಕಾನ್ವೆಂಟ್ ಶಾಲೆಯ 2024-25ನೇ ಸಾಲಿನ ಶಾಲಾ ಆರಂಭೋತ್ಸವ ಕಾರ್ಯಕ್ರಮವನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮಕ್ಕಳಲ್ಲಿ ಶಿಸ್ತು, ಪ್ರಾಮಾಣಿಕತೆ, ಮೃಧು ಮಾತು, ಮತ್ತು ಭಾಷಾಜ್ಞಾನ ಕಲಿಸುವುದು ಅವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಮಾಂಟೆಸೋರಿ ವಿದ್ಯಾಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದರು.ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಉತ್ತಮ ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಕಲಿಸಿ, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ 25 ವರ್ಷಗಳಿಮದ ಮನ್ನಡೆಯುತ್ತಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ದೇಶದ ಆಡಳಿತ ಸೇವೆ, ವೈದ್ಯಕೀಯ ರಂಗ, ತಾಂತ್ರಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ವಿದೇಶಗಳಲ್ಲೂ ದೇಶದ ಪತಾಕೆ ಹಾರಿಸಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.ನರ್ಸರಿ ಮಕ್ಕಳಿಗೆ ಬಲೂನ್ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿ ಕೊಟ್ಟು ಪುಷ್ಪಾರ್ಚನೆ ಮಾಡಿ, ಆರತಿ ಬೆಳಗಿ ಸ್ವಾಗತಿಸುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.ಆರಂಭದಲ್ಲಿ ರಶ್ಮಿ ಮತ್ತು ತಂಡದಿAದ ಪ್ರಾಥನೆ, ಆಡಳಿತಾಧಿಕಾರಿ ಮಲ್ಲಮ್ಮ ನಾಗರಾಜ್ ಸ್ವಾಗತಿಸಿದರೆ, ಕೋ-ಆರ್ಡಿನೇಟರ್ ರಾಬಿಯಾ, ಮಕ್ಕಳು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು. ಮುಖ್ಯೋಪಾಧ್ಯಯ ಮಹಮ್ಮದ್ ಫರ್ಹಾನ್ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.