
ಕೋಲಾರ,ಆ,೧೯- ಕುಪ್ಪಂನ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಟಾನದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನದ ಅರಿವು ನೀಡುತ್ತಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಅಭಿನಂದಿಸಿದರು.
ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಗಸ್ತ್ಯ ಫೌಂಡೇಷನ್ ಹಾಗೂ ಎಲ್‌ಎಸ್‌ಐ(ಎಂ.ಎಸ್‌ಎಲ್) ಸಹಯೋಗದೊಂದಿಗೆ ಮೊಬೈಲ್ ವಿಜ್ಞಾನ ಪ್ರಯೋಗಾಲಯದ ಮೂಲಕ ಶಾಲೆಗೆ ಆಗಮಿಸಿ ಮಕ್ಕಳ ಚೇತೋಹಾರಿ ಕಲಿಕೆಗೆ ನೆರವಾಗಿದ್ದನ್ನು ಸ್ವಾಗತಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ತಾಲ್ಲೂಕಿನ ೮೦ಕ್ಕೂ ಹೆಚ್ಚು ಶಾಲೆಗಳಲ್ಲಿ ಉಚಿತವಾಗಿ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿರುವ ಅಗಸ್ತ್ಯ ಫೌಂಡೇಷನ್ ಕಾರ್ಯ ಮೆಚ್ಚುವಂತದ್ದು ಎಂದ ಅವರು, ಮಕ್ಕಳಿಗೆ ತಾತ್ವಕ ಬೋಧನೆಗಿಂತ ಚಟುವಟಿಕೆಯಾಧಾರಿತ ಪ್ರಯೋಗಗಳ ಮೂಲಕ ಕಲಿಕೆ ಹೆಚ್ಚು ಕಾಲ ಮನದಲ್ಲಿ ಉಳಿಯುವಂತೆ ಮಾಡುತ್ತದೆ ಎಂದರು.
ಅಗಸ್ತ್ಯ ಫೌಂಡೇಷನ್‌ನ ವ್ಯವಸ್ಥಾಪಕ ಕೆ.ಎಸ್.ಹರೀಶ್ ಕುಮಾರ್ ಮಾತನಾಡಿ, ವಿಜ್ಞಾನ ಕಬ್ಬಿಣದ ಕಡಲೆಯಲ್ಲ, ಅತಿ ಸುಲಭ ಎಂಬುದನ್ನು ಪ್ರಯೋಗಗಳ ಮೂಲಕ ಮನಮುಟ್ಟುವಂತೆ ಕಲಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಅಗಸ್ತ್ಯ ಫೌಂಡೇಷನ್‌ನ ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಲ್.ಸುರೇಶ್ ಮತ್ತು ಎಂ.ನಾಗಪ್ಪ ಮಾತನಾಡಿ, ಕಳೆದ ೮ ವರ್ಷಗಳಿಂದ ನಾವು ಜಿಲ್ಲೆಯ ಪ್ರತಿ ಶಾಲೆಗೂ ಹೋಗಿ ವಿಜ್ಞಾನ ಪ್ರಯೋಗಗಳನ್ನು ಮಾಡಿ ಮಕ್ಕಳ ಜ್ಞಾನಾಭಿವೃದ್ದಿಗೆನೆರವಾಗುತ್ತಿರು ವುದಾಗಿ ತಿಳಿಸಿದರು.
ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಟಾನವು ಆಂಧ್ರಪ್ರದೇಶದ ಕುಪ್ಪಂನಲ್ಲಿ ೧೭೮ ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದ್ದು, ದೇಶದ ೨೨ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ತಿಂಗಳಿಗೆ ೩೦ ಶಾಲೆಗಳಿಗೆ ಭೇಟಿ ನೀಡಿ ವಾರ್ಷಿಕ ಕನಿಷ್ಟ ೭ ರಿಂದ ೮ ಬಾರಿ ವಿಜ್ಞಾನ ಪ್ರಯೋಗಗಳ ಮೂಲಕ ಶಾಲೆಗಳಲ್ಲಿ ಜ್ಞಾನ ತುಂಬಲಾಗುತ್ತಿದೆ ಎಂದರು.
ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಸುಗುಣಾ, ಫರೀದಾ, ಶ್ರೀನಿವಾಸಲು,ರಮಾದೇವಿ, ಡಿ.ಚಂದ್ರಶೇಕರ್ ಮತ್ತಿತರರಿದ್ದರು.