ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ಆರೋಗ್ಯ ಕಾಪಾಡಲು ಆಗ್ರಹ

ತುಮಕೂರು, ಸೆ. ೨೨- ಸ್ಥಗಿತಗೊಳಿಸಿರುವ ಸಾಂತ್ವನ ಕೇಂದ್ರಗಳನ್ನು ರಾಜ್ಯ ಸರ್ಕಾರ ಪುನಃ ಆರಂಭಿಸಬೇಕು. ನಿರ್ಭಯ ಯೋಜನೆ ಅನುದಾನ ಬಳಕೆ, ಮಾತೃಶ್ರೀ ಕಾರ್ಯಕ್ರಮಗಳ ಪರಿಪೂರ್ಣ ಅನುಷ್ಠಾನ ಸೇರಿದಂತೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಯೋಜನೆಗಳ ಪ್ರಯೋಜನ ಮಹಿಳೆಯರಿಗೆ ತಲುಪುವಂತೆ ಕ್ರಮ ವಹಿಸಲು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಮುರಳೀಧರ ಹಾಲಪ್ಪ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಅವರ ಜತೆ ಚರ್ಚೆ ನಡೆಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಜತೆ ನಿಯೋಗದಲ್ಲಿ ತೆರಳಿ, ಉಪನಿರ್ದೇಶಕರ ಜತೆ ಚರ್ಚಿಸಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಜಿಲ್ಲೆಯ ೩೩೦ ಗ್ರಾಮ ಪಂಚಾಯ್ತಿಗಳಲ್ಲಿ ತಮ್ಮ ಇಲಾಖೆಯಿಂದ ಮಹಿಳೆಯರು ಮಕ್ಕಳಿಗಿರುವ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ಭಾಗಗಳಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಪೌಷ್ಠಿಕ ಆಹಾರ ನೀಡಿ ಅವರ ಆರೋಗ್ಯ ಕಾಪಾಡಲು ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಿನದ ೨೪ ಗಂಟೆಯೂ ಮಹಿಳೆಯರ ರಕ್ಷಣೆಗಿರುವ ಸಾಂತ್ವನ ಕೇಂದ್ರಗಳನ್ನು ಕೂಡಲೇ ಮುಂದುವರೆಸಬೇಕು. ಜಿಲ್ಲೆಯಲ್ಲಿ ಎಷ್ಟು ಸಾಂತ್ವನ ಕೇಂದ್ರಗಳು ಸ್ಥಗಿತಗೊಂಡಿವೆಯೋ ಅವುಗಳನ್ನು ಸಹ ಸರ್ಕಾರದ ಮೇಲೆ ಒತ್ತಡ ತಂದು ಆರಂಭಿಸಬೇಕು ಎಂದು ಹೇಳಿದರು.
ಸಾಂತ್ವನ ಕೇಂದ್ರಗಳ ಆಪ್ತ ಸಮಾಲೋಚಕರಿಂದ ಇದುವರೆಗೂ ಸಹಸ್ರಾರು ಮಹಿಳೆಯರು ಸಾಂತ್ವನ ಮತ್ತು ಭರವಸೆ ಪಡೆದುಕೊಂಡಿದ್ದಾರೆ. ಈ ಕೇಂದ್ರಗಳು ನೊಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಿ ಆತ್ಮಹತ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದವು. ಆದರೆ ಇಂದು ಸಾಂತ್ವನ ಕೇಂದ್ರಗಳನ್ನು ಮುಚ್ಚಿ ಸಮಾಜದಲ್ಲಿ ನೊಂದ ಮಹಿಳೆಯರಿಗೆ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗಿದೆ ಎಂದರು.
ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮನೆಯಿಂದ ಹೊರ ಹಾಕಿರುವ ಪ್ರಕರಣ, ಪ್ರೇಮ ಪ್ರಕರಣ ಇತ್ಯಾದಿ ಮಹಿಳೆಯರ ಸಂಕಷ್ಟಕ್ಕೆ ಈ ಸಾಂತ್ವನ ಕೇಂದ್ರಗಳು ಸೌಹಾರ್ದಯುತವಾಗಿ ಸ್ಪಂದಿಸಿ ಸರಳವಾಗಿ ಪ್ರಕರಣಗಳನ್ನು ಬಗೆಹರಿಸುತ್ತಿವೆ. ಇಂತಹ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದ್ದು, ಪುನಃ ಪ್ರಾರಂಭಿಸುವಂತೆ ಆಗ್ರಹಿಸಿದರು.
ನೊಂದ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ, ಆರ್ಥಿಕ ನೆರವು, ಆತ್ಮಸ್ಥೈರ್ಯ, ಶಿಕ್ಷಣ ಉದ್ಯೋಗ ಮತ್ತು ಉಚಿತ ಕಾನೂನು ಸಾಂತ್ವನ ಯೋಜನೆಯಡಿ ನೆರವು ದೊರೆಯುತ್ತಿತ್ತು. ಆದರೆ ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿಯೇ ಮಹಿಳೆಯರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವರದಕ್ಷಿಣೆ ಕಿರುಕುಳ, ಮಹಿಳೆಯ ಕಳ್ಳಸಾಗಾಣಿಕೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೊರೋನಾ ನೆಪದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣ ಹೇಳಿ ೭೧ ಕೇಂದ್ರಗಳನ್ನು ಸ್ಥಗಿತಗೊಳಿಸಿರುವುದು ವಿಷಾಧಕರ. ಆದ್ದರಿಂದ ಸಾಂತ್ವನ ಕೇಂದ್ರಗಳನ್ನು ತಕ್ಷಣ ಆರಂಭಿಸಬೇಕು. ಉಳಿದ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯಲೇಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ಸ್ಥಗಿತಗೊಳಿಸಿದ್ದು, ಸುಕನ್ಯ ಸಮೃಧ್ದಿ ಯೋಜನೆಗೆ ವಿಲೀನಗೊಳಿಸಲಾಗಿದೆ ಎಂದು ಹೇಳುತ್ತಿದ್ದು, ಈ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟ ಆದೇಶವಾಗಲೀ ಅಥವಾ ಜಾಗೃತಿಯಾಗಲಿ ಮೂಡಿಸಿಲ್ಲ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಮಹಿಳೆಯರಿಗೆ ವಿವಿಧ ರೀತಿಯ ಸಾಲಸೌಲಭ್ಯಗಳ ಬಗ್ಗೆ, ಸ್ವಯಂ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸಿಲ್ಲ, ಜೊತೆಗೆ ಯಾವುದೇ ಯೋಜನೆಗಳೂ ಸಹ ಕಾರ್ಯಗತವಾಗಿಲ್ಲ, ಹಳೆಯ ಎನ್‌ಜಿಒಗಳಿಗೆ ಮಾತ್ರ ಇಲಾಖೆ ಮಣೆ ಹಾಕುತ್ತಿದ್ದು, ಹೊಸ ಎನ್‌ಜಿಒಗಳಿಗೆ ಯಾವುದೇ ಯೋಜನೆ ಕಾರ್ಯಗತಕ್ಕೆ ಅವಕಾಶ ನೀಡಿಲ್ಲ ಎಂದ ಅವರು, ಕೊರೋನ ಸೋಂಕು ಇಳಿಮುಖವಾದ ನಂತರ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಿ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸಿ ಪುನಃ ಆರಂಭಿಸಬೇಕು ಎಂದು ಉಪನಿರ್ದೇಶಕರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್, ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎರಡು ಸಾಂತ್ವನ ಕೇಂದ್ರಗಳನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ನಾವು ಪರಿಶೀಲನೆ ನಡೆಸಿ ಪುನಃ ಆರಂಭಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಪ್ರಧಾನಮಂತ್ರಿಗಳ ಮಾತೃವಂದನಾ ಕಾರ್ಯಕ್ರಮದಡಿ ಪ್ರತಿ ಫಲಾನುಭವಿ ಖಾತೆಗೆ ನೇರವಾಗಿ ೫೦೦೦ ರೂ. ಹಾಕಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಈ ಯೋಜನೆಯಡಿಯಲ್ಲಿ ಸುಮಾರು ೨೭ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಹಾಕಲಾಗಿದ್ದು, ಗುರಿಮೀರಿ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಮನವಿಯಲ್ಲಿ ತಿಳಿಸಲಾದ ನಿಮ್ಮ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಹಂತ ಹಂತವಾಗಿ ಬಗೆ ಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ಮುಖಂಡರಾದ ಮರಿಚನ್ನಮ್ಮ, ಚಂದ್ರಕಲಾ, ಎಸ್.ವಿ. ಗೀತಾ, ಕೆ.ಎಸ್. ಗೀತಮ್ಮ, ತಾಹೆರಾ, ಮಂಜುಳಾನಾಯಕ್, ಜಯಲಕ್ಷ್ಮಿ, ಸರೋಜ, ಮುಬೀನ ಬಾಬು, ಮಮತ, ಸೌಭಾಗ್ಯ, ಭಾಗ್ಯ, ಕವಿತಾ, ರೇಖಾ, ಟಿ.ಎಸ್.ವೀಣಾ, ಯಾಸ್ಮಿರಾ, ಸಾಹೇರಾ, ಪುಷ್ಪಾವತಮ್ಮ, ಪ್ರಕಾಶ್, ಆದಿಲ್ ಖಾನ್ ಮತ್ತಿತರರು ಭಾಗವಹಿಸಿದ್ದರು.